ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ನವಲಗುಂದ,ಫೆ18 : ರೈತ ಸಂಘಟನೆಗಳು ದೆಹಲಿ ಚಲೋ ಹೋರಾಟದಲ್ಲಿ ಪಾಲ್ಗೊಳ್ಳಲು ಹೋದ ಕರ್ನಾಟಕದ ರೈತರನ್ನು ಭೂಪಾಳದಲ್ಲಿ ಬಂಧಿಸಿದ್ದು ಖಂಡನೀಯ ಎಂದು ಮಹದಾಯಿ ಕಳಸಾ ಬಂಡೂರಿ ರೈತ ಒಕ್ಕೂಟದ ಅಧ್ಯಕ್ಷ ರಘುನಾಥರಡ್ಡಿ ನಡುವಿನಮನಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪಟ್ಟಣದ ರೈತ ಭವನದಲ್ಲಿಯ ಮಹದಾಯಿ ಹೋರಾಟ ವೇದಿಕೆಯಲ್ಲಿ ಬಂಧಿತ ರೈತರ ಬಿಡುಗಡೆ ಹಾಗೂ ರೈತರ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಅಗ್ರಹಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮುಖಾಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಹೋರಾಟ ಮಾಡುವುದು ರೈತರ ಹಕ್ಕು ಇದನ್ನು ಹತ್ತಿಕ್ಕುವ ಸರಕಾರದ ಕ್ರಮ ರೈತ ವಿರೋಧಿ ನೀತಿ ಆಗಿರುತ್ತದೆ. ಕಾರಣ ತಕ್ಷಣ ರೈತರನ್ನು ಬಿಡುಗಡೆಗೊಳಿಸಬೇಕು ಎಂದರು.

ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಪ್ಪ ಅಂಬಲಿ ಮಾತನಾಡಿ ತಾಲ್ಲೂಕಿನಲ್ಲಿ ಶೇ 85ರಷ್ಟು ಹೆಸರು ಬಿತ್ತನೆ ಆಗಿದ್ದು, ವಿಮಾ ಕಂಪನಿಯವರು ರೈತರಿಗೆ ಅನ್ಯಾಯ ಮಾಡುವ ಉದ್ದೇಶದಿಂದ ಮುಂಗಾರು ಬೆಳೆಹಾನಿಯಲ್ಲಿ ಹೆಸರು ಬೆಳೆ ನಾಶಕ್ಕೆ ನೋಟಿಫಿಕೇಶನ್ ಮಾಡಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಮರುಪರಿಶೀಲನೆ ಮಾಡಿ ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು. `ನವಲಗುಂದ ತಾಲ್ಲೂಕಿನಲ್ಲಿ ಹರಿಯುವ ಬೆಣ್ಣೆ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಲೋಕನಾಥ್ ಹೇಬಸೂರ್ ಮಾತನಾಡಿ ಮಹಾದಾಯಿ ಯೋಜನೆ ನ್ಯಾಯಾಧೀಕರಣದ ಆದೇಶ ಪ್ರಕಾರ ಕೂಡಲೆ ಕಾಮಗಾರಿ ಆರಂಭಿಸಬೇಕು. ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿ ಇರುವ ಆಡೆ-ತಡೆ ನಿವಾರಣೆಮಾಡಿ ಕುಡಿಯುವ ನೀರಿನ ಯೋಜನೆ ಕೂಡಲೇ ಅನುಷ್ಠಾನಗೊಳ್ಳಲು ಕ್ರಮ ಜರುಗಿಸಬೇಕು. ಈ ಭಾಗದ ರೈತರ ಪ್ರಮುಖ ಬೇಡಿಕೆ ಕೂಡಲೇ ಈಡೇರದಿದ್ದಲ್ಲಿ ಬಂಡಾಯದ ನಾಡಿನಲ್ಲಿ ಮತ್ತೊಮ್ಮೆ ಬಂಡಾಯ ಏಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಆಸ್ಪದ ನೀಡದೇ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಭರಮಪ್ಪ ಕಾತರಕಿ, ಡಿ ಎನ್ ಶಲವಡಿ, ವಿಠ್ಠಲ ಗೊಣ್ಣಾಗರ, ಪ್ರವೀಣ್ ಯರಗಟ್ಟಿ, ಭರಮಪ್ಪ ಛಲವಾದಿ, ಶರಣಯ್ಯ ಮಠಪತಿ, ಮಾಳಪ್ಪ ಮುಲಿಮನಿ, ಪಕ್ಕೀರಗೌಡ್ರ ದೊಡ್ಡಮನಿ, ಈರಣ್ಣ ಸೊಪ್ಪಿನ, ಬಸವರಾಜ್ ಕಾಂಬ್ಳೆ, ರಮೇಶ್ ಹಲಗತ್ತಿ, ಸೇರಿದಂತೆ ರೈತ ಮಹಿಳೆಯರೊಂದಿಗೆ ಧಾರವಾಡ , ಗದಗ , ಬೆಳಗಾವಿ , ಬಾಗಲಕೋಟ ಜಿಲ್ಲೆಗಳ ರೈತ ಮುಖಂಡರೊಂದಿಗೆ ಬೆಂಗಳೂರು ವಿಧಾನಸೌಧ ಚಲೋ ಕೈಕೊಂಡರು.