ರೈತರ ಬೇಡಿಕೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ

ರಾಯಚೂರು,ಸೆ.೨೫ – ಮಾರಕ ಮೂರು ಕೃಷಿ ಕಾಯ್ದೆ ವಾಪಸ್ಸು ಪಡೆಯಬೇಕು ಎನ್ನುವ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜ ನಾಯಕ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂ.ಎಸ್.ಪಿ ಕಾನೂನು ಬದ್ಧಗೊಳಿಸಬೇಕು. ರಾಯಚೂರು ಜಿಲ್ಲೆಯನ್ನು ಸಂಪೂರ್ಣ ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು. ಸಾಲ ಮನ್ನಾ ಮಾಡಬೇಕು.ಬ್ಯಾಂಕ್ ನಲ್ಲಿರುವ ಸಾಲದ ಪಾವತಿಯನ್ನು ಮುಂದೂಡಬೇಕು ಹೀಗೆಹಲವು ರೈತಪರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಾಸನ ಜಿಲ್ಲೆಯ ಅರಸಿಕೆರೆಯಿಂದ ಸೆ.೨೬ರಿಂದ ಪಾದಯಾತ್ರೆ ಪ್ರಾರಂಭಿಸಿ ಅಕ್ಟೋಬರ್ ೪ ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಜಿಲ್ಲೆಯ ರೈತರಿಗೆ ಈಗಾಗಲೇ ಮಾಹಿತಿಯನ್ನು ಮುಟ್ಟಿಸಲಾಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಮುತ್ತಿಗೆ ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ.ಜಿಲ್ಲೆಯಲ್ಲಿ ಈಗ ಕಂದಾಯ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸುತ್ತಿದ್ದು ವಿಶೇಷವಾಗಿ ಹತ್ತಿ ತೊಗರಿ ಬೆಳೆಗಳಿಗೆ ಗಮನ ಕೊಡುತ್ತಿದ್ದು ಭತ್ತಕ್ಕೂ ಅದನ್ನು ಅನ್ವಯಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿರೇಶನಾಯಕ, ರಾಜಾಸಾಬ್ ಸೇರಿದಂತೆ ಇತರರು ಇದ್ದರು.