ರೈತರ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.29- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಸಹಯೋಗದೊಂದಿಗೆ, ಕೂಲಿ- ಕಾರ್ಮಿಕರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮತ್ತು ರಾಷ್ಟ್ರ ಪದಾಧಿಕಾರಿಗಳು, ಸಾರ್ವಜನಿಕರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರೈತರ ಕೃಷಿ ಪಂಪ್‍ಸೆಟ್‍ಗಳ ಅನಧೀಕೃತ ವಿದ್ಯುತ್ ಸಂಪರ್ಕವನ್ನು ಅಧೀಕೃತಗೊಳಿಸಲು ಹಾಗೂ ಹೊಸ ಸಂಪರ್ಕವನ್ನು ಪಡೆಯಲು ರೈತರೇ ಪೂರ್ಣ ವೆಚ್ಚವನ್ನು ಭರಿಸಬೇಕೆಂದು ಹೊರಡಿಸಿರುವ ಆದೇಶವನ್ನು ಕೂಡಲೇ ಕೈಬಿಟ್ಟು ಸಾಂಕೇತಿಕ ಮೊತ್ತವನ್ನು ಪಡೆದು ಸಂಪರ್ಕವನ್ನು ಕಲ್ಪಿಸಬೇಕು.
ರಾಜ್ಯದಲ್ಲಿ ತಲೆದೂರಿರುವ ಬರಗಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮಪರ್ಕವಾಗಿ ಸ್ಪಂಧಿಸುತ್ತಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯ ಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ರೈತರಿಗೆ ಪೂರ್ಣ ನಷ್ಟ ಪರಿಹಾರವನ್ನು ತುಂಬಿಕೊಡಬೇಕು.
ಪೂರ್ವ ಮುಂಗಾರಿನಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿ ರೈತರು ವಿವಿಧ ಬೆಳೆ ವಿಮೆ ಪಾಲಿಸಿ ಕಟ್ಟಿದ್ದು ವಿಮಾಕಂಪನಿಯವರು ರೈತರ ಖಾತೆಗೆ ಪರಿಹಾರದ ಮೊತ್ತವನ್ನು ಕೂಡಲೇ ಪಾವತಿಸಬೇಕು ಮತ್ತು ಫಸಲು ಭೀಮಾ ಯೋಜನೆಯನ್ನು ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ವರ್ಷ ಪೂರ್ತಿ ಅನ್ವಯವಾಗುವಂತೆ ವಿಮಾಯೋಜನೆಯನ್ನು ಜಾರಿಗೆ ತರಬೇಕು.
ಕೃಷಿ ಉತ್ಪನ್ನಗಳಿಗೆ ವೈಜಾನಿಕ ಬೆಲೆಯ ನೀಡುವ ನೀತಿ ಜಾರಿಯಾಗುವವರೆಗೂ ಸ್ವಾಮಿನಾಥನ್ ‘ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ, ಎಲ್ಲಾ ಬೆಳೆಗಳನ್ನು ಸಕಾಲದಲ್ಲಿ ಖರೀದಿಸ ಬೇಕ ಅಲ್ಲಿಯವರೆಗೆ ರೈತರಿಗೆ ವಿದ್ಯುತ್ ಮತ್ತು ಕೃಷಿ ಒಳಸುರಿಗಳು ಹಾಗೂ ಮಾನವ ಸಂಪನ್ಮೂಲ ವೆಚ್ಚವನ್ನು ಉತ್ಪಾದನಾ ಸಹಾಯ ಧನವನ್ನಾಗಿ ಉದ್ಯೋಗ ಖಾತ್ರಿ ಯೋಜನೆಯ ಅಡಿ ಎಲ್ಲಾ ರೈತರಿಗೂ ನೀಡಬೇಕು.
ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕೊಡಬೇಕಾಗಿರುವ ಉಪ ಉತ್ಪನ್ನಗಳ ಬಾಕಿ ಹಣರೂ. 150: ಟನ್‍ಗೆ ಶೀಘ್ರ ಜಮಾಗೊಳಿಸಬೇಕು. ಈ ಸಾಲಿನಲ್ಲಿ ಕಬ್ಬಿಗೆಟನ್ ಒಂದಕ್ಕೆ 5000 ರೂ. ಬೆಲೆ ನಿಗಧಿ ಮಾಡಬೇಕು.
ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಬಿ.ಜೆ.ಪಿ. ಪಕ್ಷದ ಕೆಲವು ಪುಂಡರು ರೈತ ಮುಖಂಡರ ಮೇಲೆ ಹಲ್ಲೆ ಮಾಡಿದ್ದು, ಈ ಪುಂಡರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಇವರುಗಳು ರೈತ ಮುಖಂಡರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಕೈ ಬಿಡಬೇಕು.
ಜಾಗೇರಿ ಮತ್ತು ಇತರೆ ಅರಣ್ಯ ದಂಚಿನ ಪ್ರದೇಶದ ಕಂದಾಯ ಭೂಮಿಗಳಲ್ಲಿ ಬಹಳ ಹಿಂದಿನಿಂದಲೂ ಸಾಗುವಳಿ ಮಾಡುತ್ತಿರುವ ರೈತರಿಗೆ ಶೀಘ್ರವೇ ಹಕ್ಕಪತ್ರ ನೀಡಬೇಕು. ಹನೂರು ತಾಲ್ಲೂಕಿನ ರೈತರಿಗೆ ಸರ್ಕಾರದಿಂದ ಭೂ ಮಂಜೂ ರಾತಿ ಪಡೆದಿರುವ ರೈತರ ಸರ್ವೆ ನಂಬರ್‍ಗಳನ್ನು ಪೆÇೀಡಿ ಮಾಡಿ ಪ್ರತ್ಯೇಕ ಪಹಣಿ ನೀಡಬೇಕು.
ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ವನ್ಯಜೀವಿಗಳಿಂದ ರೈತರಿಗೆ ಉಂಟಾಗುವ ಬೆಳೆ, ಆಸ್ತಿ, ಪ್ರಾಣ ಹಾನಿಗೆ ಹೆಚ್ಚಿನ ಪರಿಹಾರವನ್ನು ಸಕಾಲದಲ್ಲಿ ಪಾವತಿಸಬೇಕು. ವನ್ಯಜೀವಿಗಳಿಂದ ಸಾವಿಗೀಡಾದ ಕುಟುಂಬದ ಒಬ್ಬ ಸದಸ್ಯರಿಗೆ ಖಾಯಂ ಉದ್ಯೋಗ ದೊರಕಿಸಿಕೊಡಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ವನ್ಯಜೀವಿಗಳಿಂದ ಸತ್ತ ಜಾನುವಾರುಗಳಿಗೂ ಸೂಕ್ತ ಪರಿಹಾರ ನೀಡಬೇಕು.
ಖಾಸಗಿ ಶಾಲೆಗಳ ಪ್ರವೇಶಾತಿ ಮಾನದಂಡಗಳು ಮತ್ತು ಸರ್ಕಾರ ನಿಗಧಿ ಮಾಡಿರುವ ಪ್ರವೇಶ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡಿ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ನೀಡುತ್ತಿರುವುದನ್ನು ತಪ್ಪಿಸಬೇಕು.
ರೈತರು ಅರಣ್ಯ ಪ್ರದೇಶಗಳ ವ್ಯಾಪ್ತಿಯಿಂದ ದೂರ ವಿರುವ ಕೃಷಿ ಭೂಮಿಗಳಿಗೂ ಸಹ ವನ್ಯ ಜೀವಿಗಳಿಂದ ಬೆಳೆಗಳ ರಕ್ಷಣೆಗಾಗಿ ಸೋಲಾರ್ ತಂತಿಬೇಲಿಗಳ ನಿರ್ಮಾಣಕ್ಕೆ ಸಹಾಯಧನ ನೀಡಬೇಕು.
ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಸಾಗುವಾನಿ ಮರಗಳನ್ನು ಕಟಾವು ಮಾಡುವ ಅನುಮತಿಯನ್ನು ಸರಳೀಕರಣ ಮಾಡಬೇಕು.
ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಮಾಡಬೇಕು.
ಪೂರ್ವ ಮುಂಗಾರು ಪ್ರಾರಂಭವಾಗಿದ್ದು ರೈತರು ಖರೀದಿ ಮಾಡುತ್ತಿರುವ ಭಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿರುವ ಸರ್ಕಾರದ ನಿಲುವನ್ನು ಖಂಡಿಸುತ್ತಾ ಈ ಆದೇಶವನ್ನು ಸರ್ಕಾರ ವಾಪಸ್ ಪಡೆದು ಬರಗಾಲ ಇರುವುದರಿಂದ ಜಿಲ್ಲೆಗಳಿಗೆ ಸಂಬಂಧ ಪಟ್ಟ ಭಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿ ತಮ್ಮ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ನೀಡಿದರು.
ಚಾಮರಾಜನಗರ ಪ್ರವಾಸಿ ಮಂದಿರ ಮುಂಭಾಗದಿಂದ ಹೊರಟ ವಿವಿಧ ಸಂಘಟನೆಗಳು ನಗರದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ನಡೆಸಿ, ಮೇಲ್ಕಂಡ ಹಕ್ಕೊತ್ತಾಯಗಳನ್ನು ಅತೀ ಶೀಘ್ರದಲ್ಲಿ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.