ರೈತರ ಬೆನ್ನು ಮೂಳೆ ಮುರಿಯುತ್ತಿರುವ ಸರ್ಕಾರ-ಆರೋಪ

ಕೋಲಾರ,ಡಿ.೨೨: ಶುಲ್ಕದ ಹೊಸ ಆದೇಶವನ್ನು ಮರುಪರಿಶೀಲನೆ ಮಾಡಿ ಮಾರುಕಟ್ಟೆಯನ್ನು ವಿಸ್ತರಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೈತರಿಗೆ ಆಗುವ ಅನಾನುಕೂಲಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರೈತರೇ ದೇಶದ ಬೆನ್ನೆಲುಬು ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವ ಸರ್ಕಾರಗಳು ಇಂದು ಹಿಂಭಾಗಿಲಿನಿಂದ ರೈತರ ಬೆನ್ನು ಮೂಳೆಯನ್ನು ಮುರಿಯುವ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದ್ದಾರೆ.
ಅದರಲ್ಲೂ ರೈತರ ಒಡನಾಡಿಯಾದ ಕೃಷಿ ಉತ್ಪನ್ನ ಮಾರುಕಟ್ಟೆಯ ಕೃಷಿ ಮಸೂಧೆ ಮೂಲಕ ಮಾರುಕಟ್ಟೆಯನ್ನು ಖಾಸಗಿಯವರಿಗೆ ಅಡ ಇಡಲು ಹೊರಟಿರುವುದು ಒಂದೆಡೆಯಾದ್ರೆ ಮತ್ತೊಂದೆಡೆ ಕೋಲಾರ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ದೂರಿದರು.
ಆಡಳಿತ ಮಂಡಳಿ ದಿನಕ್ಕೊಂದು ಆದೇಶಗಳನ್ನು ತರುತ್ತಿವೆ ಎಂದು ಆರೋಪಿಸಿ ಮಂಡಿ ಮಾಲೀಕರು ಬಳಕೆದಾರರ ಶುಲ್ಕ ೩೫ ಪೈಸೆಯಿಂದ ೧ ರೂಗೆ ಏರಿಕೆ ಮಾಡಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಎಪಿಎಂಸಿ ಬಂದ್ ಮಾಡುತ್ತಿದ್ದಾರೆ.
ಇದರಿಂದ ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದ ರೈತರಿಗೆ ಹೊಡೆತದ ಜೊತೆಗೆ ಮಂಡಿ ಮಾಲೀಕರು ಮಾರುಕಟ್ಟೆಯನ್ನು ತೊರೆದು ಖಾಸಗಿ ಮಂಡಿ ತೆರೆಯುವ ಯೋಚನೆಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿಎಪಿಎಂಸಿಗಳನ್ನು ಸಂಪೂರ್ಣವಾಗಿ ಮುಚ್ಚುವ ಹಂತಕ್ಕೆ ತಲುಪುತ್ತಿವೆ ಎಂದು ಎಚ್ಚರಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಸರ್ಕಾರ ಕೊರೊನಾ ಸಮಯದಲ್ಲಿ ಇಳಿಕೆ ಮಾಡಿದ್ದ ಬಳಕೆದಾರರ ಶುಲ್ಕವನ್ನು ಏರಿಕೆ ಮಾಡುವ ಮೊದಲು ಸಂಬಂಧಪಟ್ಟ ಮಂಡಿ ಮಾಲೀಕರು, ಖರೀದಿದಾರರು, ರೈತರೊಡನೆ ಸಭೆಗಳನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಮುಂದುವರೆಯಬೇಕಾಗಿತ್ತು. ಆದರೆ ಏಕಾಏಕಿ ಆದೇಶದಿಂದ ರೈತರಿಗೆ ಅನಾನುಕೂಲವಾಗುತ್ತಿದೆ.
ಆದ್ದರಿಂದ ಮಾನ್ಯ ಸಹಾಯಕ ನಿರ್ದೇಶಕರು ಕೂಡಲೇ ಸರ್ಕಾರ ಹೊರಡಿಸಿರುವ ಬಳಕೆದಾರರ ಶುಲ್ಕದ ಏರಿಕೆ ಆದೇಶವನ್ನು ಮರುಪರಿಶೀಲನೆ ಮಾಡುವ ಜೊತೆಗೆ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಮಾರುಕಟ್ಟೆಯ ಹೊರಗೆ ಹಾಗೂ ಒಳಗೆ ವಹಿವಾಟು ನಡೆಸುವ ಎಲ್ಲರಿಗೂ ಏಕರೂಪದ ಬಳಕೆದಾರರ ಶುಲ್ಕ ನಿಗಧಿಪಡಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಸಹಾಯಕ ನಿರ್ದೇಶಕರು, ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವಾಗ ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ಕಿರಣ್ ಮತ್ತಿತರರು ಇದ್ದರು.