ರೈತರ ಬೀಡಿಕೆ ಈಡೇರದಿದ್ದರೆ ಬೃಹತ್ ಪ್ರತಿಭಟನೆ: ಗಡಿಗೋಳ

ಬ್ಯಾಡಗಿ, ಮೇ27: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ಜಾರಿಗೆ ತಂದು ರೈತರನ್ನು ಸರ್ವನಾಶ ಮಾಡುತ್ತ ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ. ದೇಶದಾದ್ಯಂತ ಕಾಯ್ದೆಗಳನ್ನು ಹಿಂಪಡೆಯಿರಿ ಎಂದು ಪ್ರತಿಭಟನೆ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ರೈತರ ಕಷ್ಟವನ್ನು ಕೇಳುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ತಾಲೂಕಾ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತಾಲೂಕಾ ಕಚೇರಿಯಲ್ಲಿ ಬುಧವಾರ ತಹಶೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು, ದೇಶದಲ್ಲಿ ರೈತನ ಅಸ್ತಿತ್ವವನ್ನೇ ಅಲುಗಾಡುವಂತೆ ಮಾಡಿದೆ, ಕೇಂದ್ರ ಸರ್ಕಾರದ ಪ್ರಸ್ತುತ ತಿದ್ದುಪಡಿಯಿಂದ ಕಾಪೆರ್Çರೇಟ್ ವಲಯಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಕಳೆದ ಆರು ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ತೋರದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರಲ್ಲದೇ ಸುಗ್ರೀವಾಜ್ಞೆ ಮೂಲಕ ಕೃಷಿ ಮಸೂದೆ ಸೇರಿದಂತೆ ಎಪಿಎಂಸಿ ಕಾಯಿದೆಗಳನ್ನು ಹಿಂಪಡೆಯುವುದೂ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂನ್ 10ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನಡೆಯನ್ನು ಖಂಡಿಸಿ ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

25ಸಾವಿರ ಪರಿಹಾರ ಒದಗಿಸಲು ಆಗ್ರಹ
ರೈತ ಮುಖಂಡ ಆನಂದ ಸಂಕಣ್ಣನವರ ಮಾತನಾಡಿ, ಕಳೆದ ವರ್ಷ ಲಾಕ್‍ಡೌನ್‍ದಿಂದಾಗಿ ತರಕಾರಿ ಬೆಲೆ ಕುಗ್ಗಿ ಸಂಕಷ್ಟಕ್ಕೀಡಾಗಿದ್ದ ರೈತರ ಬದುಕನ್ನು ಈ ವರ್ಷವೂ ಕೊರೊನಾ ಕರ್ಫ್ಯೂ ಕಸಿದುಕೊಂಡಿದೆ. ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕದೆ ಕಂಗಾಲಾಗಿದ್ದಾರೆ. ಇಂಥ ದಯನೀಯ ಸ್ಥಿತಿಯಲ್ಲಿರುವ ರೈತರ ಬದುಕಿಗೆ ಲಾಕ್’ಡೌನ್ ವ್ಯವಸ್ಥೆಯು ಕೊಳ್ಳೆ ಇಟ್ಟಿರುವ ಹಿನ್ನಲೆಯಲ್ಲಿ ಪ್ರತಿ ಎಕರೆಗೆ 25ಸಾವಿರ ರೂಗಳಂತೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.