ರೈತರ ಬಿಕ್ಕಟ್ಟು ಕೇಂದ್ರಕ್ಕೆ ಕಗ್ಗಂಟು

ನವದೆಹಲಿ,ಡಿ.20- ” ರೈತರಿಲ್ಲ – ಆಹಾರವೂ ಇಲ್ಲ” ಎಂಬ ಘೋಷಣೆಯೊಂದಿಗೆ ರೈತರು ಕಳೆದ ಇಪ್ಪತ್ತೈದು ದಿನಗಳಿಂದ ನಡೆಸುತ್ತಿರುವ ಹೋರಾಟ ಮತ್ತಷ್ಟು ಕಾವು ಪಡೆದುಕೊಂಡಿದೆ. ಉತ್ತರ ಪ್ರದೇಶ,ಪಂಜಾಬ್ ಸೇರಿದಂತೆ ಮತ್ತಿತರ ರಾಜ್ಯಗಳ ಅನ್ನದಾತರು ಹೋರಾಟಕ್ಕೆ ಕೈ ಜೋಡಿಸಿರುವುದರಿಂದ ರೈತ ಹೋರಾಟದ ಕಿಚ್ಚು ವ್ಯಾಪಕವಾಗಿ ಹಬ್ಬಿದೆ.

ದೆಹಲಿ ಗಡಿಯಲ್ಲಿ ನಡುಗುವ ಚಳಿಯನ್ನ ಲೆಕ್ಕಿಸದೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಕೇಂದ್ರ ಸರ್ಕಾರಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ.

ಮೊನ್ನೆ ತಾನೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ ರದ್ದು ಮಾಡುವುದಿಲ್ಲ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ ಆಗುವುದಿಲ್ಲ ಎಂದು ಮಾಡಿದ ಮನವಿಗೂ ಕಿವಿಗೊಡದ ರೈತರು ದೇಶಾದ್ಯಂತ ರೈತರ ಬೆಂಬಲ ಪಡೆದು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಒಂದೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿ ತಮ್ಮ ಕೂಗನ್ನು ದೆಹಲಿ ದೊರೆಗೆ ಮುಟ್ಟಿಸಲು ಪ್ರಯತ್ನ ನಡೆಸುತ್ತಿದ್ದರೆ ಮತ್ತೊಂದೆಡೆ ಕಾನೂನು ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.

ರೈತರ ಹೋರಾಟವನ್ನು ಬೆಂಬಲಿಸಿ ಉತ್ತರಪ್ರದೇಶ ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಹೆದ್ದಾರಿ ತಡೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

೨೦ಕ್ಕೂ ಹೆಚ್ಚು ರೈತರ ಸಾವು:

ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಳೆದ ೨೫ ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟದಲ್ಲಿ ದೆಹಲಿಯ ಗಡಿಭಾಗದಲ್ಲಿ ೨೦ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದೆಹಲಿಯ ರಾಜ್ಯ ಹೆದ್ದಾರಿ ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾವಿರಾರು ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಹೀಗಾಗಿ ರೈತರ ಹೋರಾಟಕ್ಕೆ ದೇಶಾದ್ಯಂತ ದಿನದಿಂದ ದಿನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ದೆಹಲಿ ಪಂಜಾಬ್ ಹರಿಯಾಣ ಉತ್ತರಪ್ರದೇಶ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಸಾವಿರಾರು ರೈತರು ಚಳಿ-ಮಳೆ ಎನ್ನದೆ ರಸ್ತೆಯ ಮೇಲೆ ಆಹಾರ ತಯಾರಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ ಆದರೂ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ ಇದು ರೈತರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

ಶೀಘ್ರ ಮಾತುಕತೆ:

ಪ್ರತಿಭಟನಾನಿರತ ರೈತರು ಮತ್ತು ರೈತ ನಾಯಕರೊಂದಿಗೆ ಕೇಂದ್ರ ಸರ್ಕಾರ ಒಂದೆರಡು ದಿನಗಳಲ್ಲಿ ಮಾತುಕತೆ ನಡೆಸಲಿದೆ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ರೈತರು ಮತ್ತು ರೈತ ನಾಯಕರು ಭಾರತ ಕಥೆಗೆ ಒಪ್ಪಲಿ ಬಿಡಲಿ ಆದರೆ ಕೇಂದ್ರ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ .ಈ ವಿಷಯವನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ

ಕೇಂದ್ರದ ವಿರುದ್ಧ ವಾಗ್ದಾಳಿ

ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರಿಗೆ ತೆರಿಗೆ ಪಾವತಿ ಹೆಸರಲ್ಲಿ ನೋಟಿಸ್ ಜಾರಿ ಮಾಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ರೈತರನ್ನು ಹತ್ತಿಕ್ಕಲು ಹಿಂಬಾಗಿಲ ಮೂಲಕ ಪ್ರಯತ್ನಪಡುತ್ತಿದೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ದೂರಿದ್ದಾರೆ

ರಾಜಕೀಯೇತರ ಹೋರಾಟ:

ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ನಡೆಸುತ್ತಿರುವ ಹೋರಾಟ ರಾಜಕೀಯೇತರ ವಾದದ್ದು ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಸಹಭಾಗಿತ್ವ ಇಲ್ಲ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ.

ರೈತರು ನಡೆಸುತ್ತಿರುವ ಉದ್ದೇಶದ ಹಿಂದೆ ಪ್ರತಿ ಪಕ್ಷಗಳ ಕೈವಾಡವಿದೆ ಎಂದು ಕೇಂದ್ರ ಸರ್ಕಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸಮಿತಿ ಪ್ರಧಾನಿ ನರೇಂದ್ರ ಮೋದಿ , ಕೃಷಿ ಸಚಿವ ನರೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಸ್ಪಷ್ಟಪಡಿಸಿದೆ.