ರೈತರ ಬಾಳು ಹಸನಾಗಿಸಲು ಕೊತ್ತೂರು ಮಂಜುನಾಥ್ ಸಂಕಲ್ಪ

ಕೋಲಾರ,ಜೂ,೧- ಸರ್ವರಿಗೂ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಅನ್ನ ನೀಡುವ ರೈತರ ಬಾಳು ಹಸನಾಗಿಸುವ ಸಂಕಲ್ಪದೊಂದಿಗೆ ನಾನು ಶಾಸಕನಾಗಿ ಬದ್ದತೆಯಿಂದ ಕೆಲಸ ಮಾಡುವೆ ಎಂದು ನೂತನ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಘೋಷಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ೨೦೨೩-೨೪ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಸ್ವತಃ ಸಿಹಿ ತಿನ್ನಿಸಿ, ಶಿಕ್ಷಕರಿಗೂ ಸಿಹಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡರೆ ಮಾತ್ರವೇ ಸರ್ವರಿಗೂ ಶಿಕ್ಷಣ ಸಿಗಲು ಸಾಧ್ಯ ಎಂದ ಅವರು, ವಾರಕ್ಕೊಂದು ದಿನ ಒಂದು ಸರ್ಕಾರಿ ಶಾಲೆಗೆ ಹೋಗಿ ಒಂದು ಗಂಟೆ ಮಕ್ಕಳೊಂದಿಗೆ ಕಳೆದರೆ ಸಾಕು ಸಾಕ್ಷಾತ್ ದೇವರ ದರ್ಶನ,ದೇವಾಲಯಕ್ಕೆ ಹೋದ ನೆಮ್ಮದಿ,ರೈತರಿಗೆ ಕೈಮುಗಿದರೆ ದೇವರಿಗೆ ಕೈಮುಗಿದಂತೆ ಭಾಸವಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಆಕರ್ಷಣೀಯಗೊಳಿಸಿ, ಪೋಷಕರಲ್ಲಿ ನಂಬಿಕೆ ಬಲಗೊಳಿಸಿ, ದಾಖಲಾತಿ ಹೆಚ್ಚಿಸಿ, ಶಿಕ್ಷಣ ಪ್ರೇಮಿಯಾಗಿ ಸರ್ಕಾರದ ಅನುದಾನದ ಜತೆಗೆ ಶಾಲೆ,ಮಕ್ಕಳಿಗಾಗಿ ವೈಯಕ್ತಿಕವಾಗಿಯೂ ಅಪಾರ ನೆರವು ನೀಡುವ ಉದಾರ ಗುಣ ಹೊಂದಿರುವ ಶಾಸಕ ಕೊತ್ತೂರು ಮಂಜುನಾಥ್‌ರ ನೆರವು ಪಡೆದು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮಪಡಿಸೋಣ, ಇಲ್ಲಿಂದ ಐಎಎಸ್,ಐಪಿಎಸ್,ಕೆಎಎಸ್ ಸಾಧಕರನ್ನು ದೇಶಕ್ಕೆ ನೀಡೋಣ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ,ನಾವು ಕನಿಷ್ಟ ೧ ಅಥವಾ ೨ನೇ ಸ್ಥಾನಕ್ಕೆ ಬರಬೇಕು ಈ ಸಂಕಲ್ಪ,ಗುರಿಯೊಂದಿಗೆ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ, ಪೂರ್ವಪ್ರಾಥಮಿಕ ಶಿಕ್ಷಣ ಸಿಗುವಂತಾದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ತಿಳಿಸಿ, ಶಾಲೆಗೆ ಅಗತ್ಯ ಮೂಲಸೌಲಭ್ಯಗಳ ಕುರಿತಾದ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನಂದಿನಿ ಪ್ರವೀಣ್, ಶಾಸಕರ ಸ್ನೇಹಿತ ನರಸಿಂಹ,ಗ್ರಾ.ಪಂ ಅಧ್ಯಕ್ಷರುಗಳಾದ ರಾಜಣ್ಣ, ವಕ್ಕಲೇರಿ ಮುರಳಿ,ಮುಖಂಡ ಸೊಣ್ಣೇಗೌಡ, ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್,ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಸದಸ್ಯರಾದ ರಾಮಚಂದ್ರಪ್ಪ, ಮತ್ತಿತರರಿದ್ದರು.