ರೈತರ ಬಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಬಿರುಗಾಳಿ

ತಿ.ನರಸೀಪುರ: ಮೇ.20:- ಕಳೆದ ಒಂದು ವಾರದ ಹಿಂದೆ ತಾಲೂಕಿನಾದ್ಯಂತ ಭಾರೀ ಬಿರುಗಾಳಿ ಸಹಿತ ಮಳೆ ಬಿದ್ದಿದ್ದು, ಬಿರುಗಾಳಿಯಿಂದ ರೈತರ ಜಮೀನುಗಳಲ್ಲಿ ಬೆಳೆದಿದ್ದ ಬಾಳೆ, ಸಪೆÇೀಟ, ಟಮೋಟ, ಸವತೆ, ಹಾಗಲಕಾಯಿ ,ಹೀರೆಕಾಯಿ ,ಪರಂಗಿ, ಬೀನ್ಸ್ ಮತ್ತು ಚೊಟ್ಟು ಬೆಳೆಗಳು ಬಹುತೇಕ ನೆಲಕಚ್ಚಿವೆ. ಹಲವೆಡೆ ತೆಂಗಿನ ಮರಗಳು ಮುರಿದು ಬಿದ್ದು ರೈತರು ಭಾರೀ ನಷ್ಟಕ್ಕೆ ಸಿಲುಕಿದ್ದಾರೆ.
ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ ಬಾಳೆ ,ಟೊಮೊಟೊ, ಹೀರೆಕಾಯಿ ಚೊಟ್ಟು ಬೆಳೆಗಳು ಸಂಪೂರ್ಣ ನಾಶವಾಗಿದ್ದು,ಬಿರುಗಾಳಿಯಿಂದ ಸುಮಾರು ತಾಲೂಕಿನ 200ಕ್ಕೂ ಹೆಚ್ಚು ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಫಸಲುಗಳನ್ನು ಕಳೆದುಕೊಂಡಿದ್ದು, ಸುಮಾರು 3 ಕೋಟಿ ರೂಗಳಷ್ಟು ನಷ್ಟ ಆಗಿರಬಹುದು ಎಂದು ತಿಳಿದುಬಂದಿದೆ.
ತಾಲೂಕಿನ ಸುಜ್ಜಲೂರು,ತುರಗನೂರು,ಬೊಮ್ಮನಾಯಕನಹಳ್ಳಿ,ದೊಡ್ಡಲಕ್ಷ್ಮೀಪುರ,ಚಿದ್ರವಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಬಾಳೆ ಗಿಡಗಳು ಮುರಿದು ಬಿದ್ದಿದ್ದರೆ,ಮಾರಗೌಡನಹಳ್ಳಿ ,ಕುಪ್ಯ ರಂಗನಾಥಪುರಗಳಲ್ಲಿ ಟೊಮೊಟೊ ಬೆಳೆ ಹಾನಿಗೊಳಗಾಗಿದೆ.ರಂಗನಾಥಪುರ,ಕುಪ್ಯ ಹಿಟ್ಟವಳ್ಳಿ ,ಬೊಮ್ಮನಾಯಕನಹಳ್ಳಿ,ಮುತ್ತತ್ತಿ ,ಮಾರಗೌಡನಹಳ್ಳಿ ಮತ್ತು ದೊಡ್ಡಲಕ್ಷ್ಮೀಪುರ ಗ್ರಾಮಗಳಲ್ಲಿನ ತೆಂಗಿನ ತೋಟಗಳಲ್ಲಿ ಮರಗಳು ಮುರಿದುಬಿದ್ದಿವೆ.ಇದರಿಂದ ರೈತರು ಭಾರೀ ನಷ್ಟವನ್ನು ಅನುಭವಿಸಿದ್ದು,ಅವರ ಗೋಳನ್ನು ಕೇಳುವವರು ಯಾರು ಇಲ್ಲದಂತಾಗಿದೆ.
ಅವೈಜ್ಞಾನಿಕ ಸರ್ವೇ ಕಾರ್ಯಕ್ಕೆ ಅತೃಪ್ತಿ:
ತೋಟಗಾರಿಕೆ ಬೆಳೆ ನಾಶ ಪ್ರಕರಣಗಳಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಗಳು ಹಳೆಯ ಮಾದರಿಯಲ್ಲಿ ಜಂಟಿ ಸರ್ವೇ ನಡೆಸುತ್ತಿದ್ದು, ಇದು ಅವೈಜ್ಞಾನಿಕ ಮಾದರಿಯಲ್ಲಿದೆ. ಇದರಿಂದ ರೈತರ ನಷ್ಟಕ್ಕೆ ಸಮರ್ಪಕ ಪರಿಹಾರ ಸಿಗುವುದಿಲ್ಲ ಎಂಬ ಆರೋಪವಿದೆ. ಪ್ರಸಕ್ತ ದಿನಗಳಲ್ಲಿ ಬಾಳೆ, ಟೊಮೊಟೊ, ಹೀರೆಕಾಯಿ, ಸವತೆಕಾಯಿ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹೆಚ್ಚು ವೆಚ್ಚ ತಗಲುತ್ತಿದ್ದು, ವೆಚ್ಚಧಾರಿತ ಪರಿಹಾರ ನೀಡಬೇಕು ಎಂಬುದು ರೈತರ ಬೇಡಿಕೆ ಆಗಿದೆ.
ಸೌಜನ್ಯಕ್ಕೂ ಭೇಟಿ ನೀಡದ ಶಾಸಕರು:
ಘಟನೆ ನಡೆದು ಒಂದು ವಾರ ಕಳೆದಿದ್ದರೂ ಸಂಬಂಧಪಟ್ಟ ಶಾಸಕರು ಇತ್ತ ಗಮನಹರಿಸಿಲ್ಲ.ಸ್ಥಳಕ್ಕೆ ಬಂದು ರೈತರ ಕಷ್ಟ ಮತ್ತು ಅಹವಾಲು ಆಲಿಸಿಲ್ಲ. ಅಧಿಕಾರದ ಆಸೆಗೆ ಶಾಸಕರು ಕೇಂದ್ರಸ್ಥಾನದಲ್ಲಿ ಬೀಡು ಬಿಟ್ಟಿದ್ದು, ಚುನಾವಣಾ ಸಮಯದಲ್ಲಿ ಮಾತ್ರ ರೈತರು ನೆನಪಿಗೆ ಬರುವುದು ದೊಡ್ಡ ದುರಂತ.ರಾಜಕೀಯ ನಾಯಕ ಅಧಿಕಾರ ಹಪಾಹಪಿಯಿಂದ ರೈತರು ಬಾಳು ಬೀದಿಗೆ ಬಿದ್ದಿದ್ದು, ಇದರಿಂದ ರಾಜಕೀಯ ನಾಯಕರಿಗೆ ಸೇವಾಮನೋವೃತ್ತಿ ಇಲ್ಲದಿರುವುದು ಢಾಳಾಗಿ ಗೋಚರಿಸುತ್ತಿದೆ.