ರೈತರ ಬಾಕಿ ಹಣ ಬಿಡುಗಡೆಗೆ ರೈತ ಸಂಘ ಒತ್ತಾಯ

ರಾಯಚೂರು.ಏ.೨೮- ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಸರ್ಕಾರ ಕೃಷಿ ಉತ್ಪನ್ನಗಳನ್ನು ಖರೀದಿಸಿದ್ದು ೩ ತಿಂಗಳಾದರು ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ರೈತರ ಖಾತೆಗಳಿಗೆ ಬಾಕಿ ಹಣ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಖರೀದಿ ಕೇಂದ್ರಗಳಲ್ಲಿ ತೊಗರಿ, ಭತ್ತ, ಜೋಳ ಖರೀದಿಸಿದ ಸರ್ಕಾರ ೩ ತಿಂಗಳಾದರೂ ಹಣ ನೀಡಿಲ್ಲ. ಸಕಾರದಿಂದ ರೈತರಿಗೆ ಸುಮಾರು ೧೪೫೦ ಕೋಟಿ ರೂ. ಹಣ ಬಾಕಿ ಬರಬೇಕಿದೆ. ರೈತರು ಸಾಲ ಮಾಡಿಯೇ ಕೃಷಿ ಮಾಡಿರುತ್ತಾರೆ. ಮತ್ತೆ ಬಿತ್ತನೆ ಮಾಡಬೇಕಾದರೆ ಅವರಿಗೆ ಹಣ ಅಗತ್ಯ ಹೆಚ್ಚಾಗಿದ್ದು ಸರ್ಕಾರ ಈ ರೀತಿ ವಿಳಂಬ ನೀತಿ ಪಾಲಿಸುವುದು ಖಂಡನೀಯ ರೈತರಿಗೆ ಸಕಾಲಕ್ಕೆ ಹಣ ಪಾವತಿಯಾಗದ ಕಾರಣ ಅವರು ತಂದ ಸಾಲಕ್ಕೆ ಬಡ್ಡಿ ಕಟ್ಟುವಂತಾಗಿದೆ. ಇದು ಹೆಚ್ಚಾಗಿ ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ಈಗಾಗೀ ಸಕಾರ ಕೂಡಲೇ ಎಲ್ಲಾ ಬಾಕಿ ಹಣವನ್ನು ಬಡ್ಡಿ ಸಹಿತವಾಗಿ ರೈತರ ಖಾತೆಗಳಿಗೆ ವಿತರಿಸಬೇಕು. ಅದರ ಜೊತೆಗೆ ಭತ್ತದ ೨ ನೇ ಬೆಳೆ ಕಟಾವು ಕಾರ್ಯ ನಡೆದಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಖರೀದಿ ಕೇಂದ್ರ ಆರಂಭಿಸಿ ಸೂಕ್ತ ಬೆಂಬಲ ಬೆಲೆಗೆ ಖರೀದಿಸಿಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಹೆಚ್. ರವಿಕುಮಾರ, ಗೌರಾವಾಧ್ಯಕ್ಷ ಮಲ್ಲನಗೌಡ, ಮಲ್ಲಿಕಾರ್ಜುನ ರೆಡ್ಡಿ, ಮಂಜುನಾಥ, ಬಡೆಸಾಬ್, ಸೋಮರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದರು.