
ಕಲಬುರಗಿ,ಅ 17: ಕೃಷಿ ಸಾಲ ಪಡೆದ ರೈತರಿಗೆ ನೀಡುತ್ತಿರುವ ಮಾನಸಿಕ
ಕಿರುಕುಳ ನಿಲ್ಲಿಸುವ ಮೂಲಕ ಕೃಷಿ ಸಾಲದ ಒನ್ ಟೈಂ
ಸೆಟಲ್‍ಮೆಂಟ್‍ಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಬಳ್ಳಾರಿ
ನಗರದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಪಿಕೆಜಿಬಿ)
ಪ್ರಧಾನ ಕೇಂದ್ರ ಕಚೇರಿ ಎದುರು ಇದೇ ಆಗಸ್ಟ್ 21ರಂದು
ರೈತರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಿದ್ದಾರೆ ಎಂದು
ಆಳಂದ ಶಾಸಕ ಹಾಗೂ ರೈತ ಮುಖಂಡ ಬಿ.ಆರ್.ಪಾಟೀಲ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ
ಅವರು, ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರ ಮುಖಂಡರಾದ
ರಾಕೇಶ್ ಟಿಕಾಯತ್, ಯದುವೀರ್‍ಸಿಂಗ್, ರೈತ ಸಂಘದ ಚುಕ್ಕಿ
ನಂಜುಂಡಸ್ವಾಮಿ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳು
ರೈತ ನಾಯಕರು ಈ ಪ್ರತಿಭಟನಾ ಸಮಾವೇಶದಲ್ಲಿ
ಪಾಲ್ಗೊಳ್ಳುವ ಮೂಲಕ 139 ದಿನಗಳಿಂದ ಬಳ್ಳಾರಿಯಲ್ಲಿ ಧರಣಿ
ನಡೆಸುತ್ತಿರುವ ರೈತರಿಗೆ ನೈತಿಕ ಬೆಂಬಲ ನೀಡಲಿದ್ದಾರೆ ಎಂದರು.
ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದಾಗಿ
ಲಕ್ಷಾಂತರ ರೈತರು ಪಿಕೆಜಿ ಬ್ಯಾಂಕ್‍ನಿಂದ ಪಡೆದಿರುವ ಕೃಷಿ ಸಾಲ
ಹಿಂದಿರುಗಿಸಲು ಆಗಿಲ್ಲ. ವಸ್ತುಸ್ಥಿತಿ ಹೀಗಿರುವಾಗ ರೈತರ ಸಾಲದ
ಮೇಲೆ ಬಡ್ಡಿ ಮತ್ತು ಚಕ್ರಬಡ್ಡಿ ಹೇರುತ್ತಾ ಬಂದಿರುವ ಬ್ಯಾಂಕ್
ಒಟ್ಟು ಎಲ್ಲ ಸುಸ್ತಿದಾರರಿಂದ ರೂ.27 ಸಾವಿರ ಕೋಟಿ ಬಾಕಿ ಪಡೆಯಲು
ಮೇಲಿಂದ ಮೇಲೆ ಕಿರುಕುಳ ನೀಡುತ್ತಿದೆ. 2015ರಲ್ಲಿ ಮೂರು
ಲಕ್ಷ ರೂ. ಸಾಲ ಪಡೆದಿದ್ದ ರೈತನ ಬಾಕಿ ಸಾಲಕ್ಕೆ ಚಕ್ರಬಡ್ಡಿ
ಸೇರ್ಪಡೆ ಮಾಡಿ 27 ಲಕ್ಷ ರೂ. ನೀಡುವಂತೆ ಕಿರುಕುಳ
ನೀಡಲಾಗುತ್ತಿದೆ. ಮತ್ತೊಬ್ಬ ರೈತ ಪಡೆದಿರುವ 1 ಲಕ್ಷ ಸಾಲಕ್ಕೆ
ಬಡ್ಡಿ ಸೇರ್ಪಡೆ ಮಾಡಿ 10 ಲಕ್ಷ ರೂ. ಪಾವತಿಸುವಂತೆ
ಒತ್ತಾಯಿಸಲಾಗುತ್ತಿದೆ. ಇಂತಹ ಸಾವಿರಾರು ಪ್ರಕರಣಗಳಿದ್ದು,
ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ಪಾಟೀಲ್ ವಿಷಾದ
ವ್ಯಕ್ತಪಡಿಸಿದರು.
ರೈತರು ತಾವು ಪಡೆದಿರುವ ಸಾಲ ಹಿಂದಿರುಗಿಸಲು ಹಿಂದೇಟು
ಹಾಕುತ್ತಿಲ್ಲ. ಬದಲಿಗೆ ಬಾಕಿ ಇರುವ ಸಾಲದ ಪಾವತಿಗೆ
ಅನುಕೂಲವಾಗುವಂತೆ ಏಕಕಾಲಕ್ಕೆ ಪಾವತಿಸುವಂತಾಗಲು
ಒನ್‍ಟೈಂ ಸೆಟಲ್‍ಮೆಂಟ್‍ಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸುತ್ತಾ
ಬಂದಿದ್ದಾರೆ. ಈ ಮಧ್ಯೆ, ಕಳೆದ 139 ದಿನಗಳಿಂದ ಬಳ್ಳಾರಿ ಸೇರಿದಂತೆ ಈ
ಭಾಗದ ವಿವಿಧ ಜಿಲ್ಲೆಗಳ ರೈತರು ಬಳ್ಳಾರಿಯ ಪಿಕೆಜಿಬಿ ಕೇಂದ್ರ
ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟಾದರೂ,
ರಾಜ್ಯದಲ್ಲಿರುವ 24 ಬಿಜೆಪಿ ಸಂಸದರ ಪೈಕಿ ಯಾರೊಬ್ಬರೂ ಧರಣಿ
ನಿರತ ರೈತರನ್ನು ಭೇಟಿ ಮಾಡುವ ಸೌಜನ್ಯ ತೋರಿಲ್ಲ ಎಂದು
ಅವರು ಅಸಮಾಧಾನ ಹೊರಹಾಕಿದರು.
ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಬ್ಯಾಂಕ್
ಮುಖ್ಯಸ್ಥರೊಂದಿಗೆ ಮಾತನಾಡಿ ರೈತರ ಸಂಕಷ್ಟ ನಿವಾರಣೆಗೆ
ಮುಂದಾಗಬೇಕು ಎಂದು ಆಗ್ರಹಿಸಿದ ಬಿ.ಆರ್.ಪಾಟೀಲ್, ಆ.22ರಂದು
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಕೇಶ್
ಟಿಕಾಯತ್ ಸೇರಿದಂತೆ ವಿವಿಧ ರೈತ ಮುಖಂಡರನ್ನು ಭೇಟಿ ಮಾಡಿ
ಚರ್ಚಿಸಲಿದ್ದಾರೆ. ಆ ಮೂಲಕ ಪಿಕೆಜಿಬಿ ಸುಸ್ತಿದಾರ ರೈತರ
ಸಂಕಷ್ಟಕ್ಕೆ ದನಿ ಆಗಲಿದ್ದಾರೆ ಎಂದರು.
ಆಳಂದ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗುರುಲಿಂಗ ಜಂಗಮ
ಪಾಟೀಲ್, ಆಳಂದ ಪುರಸಭೆ ಸದಸ್ಯ ತಯ್ಯಬ್ ಅಲಿ, ಪಿಎಲ್‍ಡಿ ಬ್ಯಾಂಕ್
ಮಾಜಿ ಅಧ್ಯಕ್ಷ ಅನಂತರಾಜ್ ಸಾಹು, ಮುಖಂಡ ಶರಣು ಪಾಟೀಲ್
ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
10 ವರ್ಷಗಳ ನಿರೀಕ್ಷಿತ ಯೋಜನೆ ಅಗತ್ಯ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಎಲ್ಲ
ಪ್ರದೇಶಗಳಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತ
ಪ್ರಾತಿನಿಧ್ಯತೆ ದೊರಕಲು 10 ವರ್ಷಗಳ ನಿರೀಕ್ಷಿತ ಯೋಜನೆ
ರೂಪಿಸುವ ಅಗತ್ಯವಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ಸಲಹೆ
ನೀಡಿದರು.
ಈ ಕುರಿತು ತಾವು ಈಗಾಗಲೇ ಕೆಕೆಆರ್‍ಡಿಬಿ ಕಾರ್ಯದರ್ಶಿ ಅನಿರುದ್ಧ
ಶ್ರವಣ್ ಅವರೊಂದಿಗೆ ಚರ್ಚಿಸಿದ್ದು, ಇಷ್ಟರಲ್ಲೇ ಕೆಕೆಆರ್‍ಡಿಬಿ
ನೂತನ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್‍ಸಿಂಗ್
ಅವರೊಂದಿಗೂ ಚರ್ಚಿಸುವುದಾಗಿ ಪಾಟೀಲ್ ಹೇಳಿದರು.
ಯಾರೇ ಅಧ್ಯಕ್ಷರಾದರೂ ಅಭಿವೃದ್ಧಿ ಕಾರ್ಯಗಳ ಕುರಿತು
ಪಕ್ಕಾ ಯೋಜನೆ ಇರಬೇಕು. ಕೆಕೆಆರ್‍ಡಿಬಿ ವ್ಯಾಪ್ತಿಯಲ್ಲಿ ಬರುವ
ಏಳು ಜಿಲ್ಲೆಗಳ ಪ್ರತಿ ತಾಲೂಕಿನ ಭೌಗೋಳಿಕ ಹಿನ್ನೆಲೆ
ಬೇರೆಯದ್ದೇ ಆಗಿರುತ್ತದೆ. ಹೀಗಿರುವಾಗ ಆಯಾ ಜಿಲ್ಲೆಯ
ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು
ರೂಪಿಸಬೇಕಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಕೆಕೆಆರ್‍ಡಿಬಿಗೆ
ನೇಮಕಗೊಂಡಿರುವ ಮೂವರು ತಜ್ಞರು ಸಭೆಗಳಿಗೆ
ಹಾಜರಾಗುತ್ತಿದ್ದರೂ, ಅವರಿಂದ ಯಾವುದೇ ಸಲಹೆ-
ಸೂಚನೆಗಳನ್ನು ಪಡೆಯಲು ಬೋರ್ಡ್ ಅಧಿಕಾರಿಗಳು
ಮನಸ್ಸು ಮಾಡುತ್ತಿಲ್ಲ. ಮೊದಲು ಇಂತಹ ಮನಸ್ಥಿತಿ ಬಿಡಬೇಕು
ಎಂದು ಅವರು ಅಭಿಪ್ರಾಯಪಟ್ಟರು.
ಎಂಎಲ್‍ಎಗಳಿಗೆ ಮಾರ್ಕೆಟ್ ಬಂದಿದೆ!
ಪತ್ರ ಬಹಿರಂಗ ಪ್ರಕರಣದ ಬಳಿಕ ಎಲ್ಲವೂ ಸರಿ ಹೋಗಿದೆ.
ಮೇಲಾಗಿ, ಎಲ್ಲ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವ
ಕೆಲಸವನ್ನು ಮುಖ್ಯಮಂತ್ರಿಗಳು ಸಭೆಯ ಮೂಲಕ
ಮಾಡಿದ್ದಾರೆ. ಇದರಿಂದಾಗಿ ಈಗ ಶಾಸಕರಿಗೆ ಪುನಃ ಮಾರ್ಕೆಟ್ (ಬೇಡಿಕೆ)
ಬಂದಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ಸೂಚ್ಯವಾಗಿ ತಮ್ಮ ಗೆಲುವಿನ
ಕುರಿತು ಸಮಾಧಾನ ವ್ಯಕ್ತಪಡಿಸಿದರು.
‘ತಮ್ಮನ್ನು ಕಾಡುತ್ತಿದ್ದ ಅಸಮಾಧಾನ ಸ್ವಲ್ಪ ಕಡಿಮೆ
ಆಗಿದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಮಿಂಚಿನ ಪ್ರತಿಕ್ರಿಯೆ
ನೀಡಿದ ಅವರು, ‘ನನಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮ
ಅಭಿಪ್ರಾಯಗಳನ್ನು ತಿಳಿಸಲು ಪಕ್ಷದ ಆಂತರಿಕ
ಪ್ರಜಾಪ್ರಭುತ್ವದಲ್ಲಿ ಲಭ್ಯವಿರುವ ಅಧಿಕಾರ ಬಳಸಿಕೊಳ್ಳುವ
ಅಧಿಕಾರ ಎಲ್ಲ ಶಾಸಕರಿಗೂ ಇದೆ. ಅದನ್ನೇ ನಾವು ಮಾಡಿದ್ದು’
ಎಂದರು.