ರೈತರ ಬದುಕು ನುಂಗಿದ ಅಕಾಲಿಕ ಮಳೆ

ಬೆಂಗಳೂರು, ನ. ೧೯- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಅಕಾಲಿಕ ಮಳೆಯಿಂದಾಗಿ ಚಿಕ್ಕಮಗಳೂರು, ಬೆಳಗಾವಿ, ಕೊಪ್ಪಳ, ರಾಯಚೂರು, ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರು ಕಂಗಾಲಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಇದರ ಜೊತೆಗೆ ಮೈ ಕೊರೆಯುವ ಚಳಿ ಬೆಂಗಳೂರು ಜನತೆಯನ್ನು ಕಂಗೆಡೆಸಿದೆ.ನಿನ್ನೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಹೈರಾಣಾರಾಗಿದ್ದಾರೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡೀ ಪರಿತಪಿಸುವಂತಾಗಿದೆ.
ಹಲಸೂರಿನ ಲಿಡೋ ಮಾಲ್ ಬಳಿ ೫೦ ವರ್ಷದಷ್ಟು ಹಳೆಯ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡ ಉರುಳಿ ಬೀಳುವ ಸಂಶಯವಿದ್ದರಿಂದ ಕುಟುಂಬ ಸದಸ್ಯರು ಬೇರೆ ಮನೆಗೆ ತೆರಳಿದ್ದರು. ಎಲ್ಲಾ ವಸ್ತುಗಳು ಮಣ್ಣು ಪಾಲಾಗಿದ್ದು, ಮೂರು ಬೈಕ್ ಜಖಂಗೊಂಡಿವೆ.
ಆರ್.ಟಿ. ನಗರದಲ್ಲಿ ಎರಡು ಮರ ಉರುಳಿಬಿದ್ದಿದೆ. ಛಲವಾದಿ ಪಾಳ್ಯದಲ್ಲಿ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದರೆ ಕಂಠೀರವ ನಗರದಲ್ಲಿ ಗೋಡೆ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಯಾಪಾಯವಾಗಿಲ್ಲ. ಆರ್‌ಆರ್ ನಗರ, ಮಲ್ಲಸಂದ್ರದಲ್ಲಿ ಮನೆಗೆ ಕೊಳಚೆ ನೀರು ನುಗ್ಗಿ ಕೆರೆಯಂತಾಗಿದೆ.
ಮಹಾದೇವಪುರ ವಲಯದ ೮ ಕಡೆ ಮಳೆ ನೀರು ನುಗ್ಗಿರುವ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿವೆ. ಬಸವನಪುರ ಮುಖ್ಯರಸ್ತೆ, ಸೀಗೆಹಳ್ಳಿ, ಹೊರಮಾವು, ವಡ್ಡರಪಾಳ್ಯ, ಬೆಳ್ಳಂದೂರು ಪ್ರದೇಶಗಳಿಗೆ ನೀರು ನುಗ್ಗಿದೆ. ಯಲಹಂಕದಲ್ಲೂ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಇದೇ ವೇಳೆ ದಕ್ಷಿಣ ಕರ್ನಾಟಕ ವರುಣ ಆರ್ಭಟಕ್ಕೆ ತತ್ತರಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಜಮೀನಿನಲ್ಲಿ ಮೊಣಕಾಲಿನ ಉದ್ದದಷ್ಟು ನೀರು ನಿಂತು ಬೆಳೆಗಳು ಕೊಚ್ಚಿ ಹೋಗಿವೆ.
ಅಕಾಲಿಕ ಮಳೆಯಿಂದಾಗಿ ಸಾಲ ಮಾಡಿ, ರೈತರು ಬೆಳೆದಿದ್ದ ಬೆಳೆ ನೀರು ಪಾಲಾಗಿವೆ. ಇದರಿಂದಾಗಿ ಅನ್ನದಾತರ ಪರಿಸ್ಥಿತಿ ದಯನೀಯವಾಗಿದ್ದು ಸರ್ಕಾರ ನೆರವಿಗೆ ಧಾವಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಮಳೆ ಬೀಳುವ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಏಳು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣಕನ್ನಡ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ಬೆಳಗಾವಿ, ಧಾರಾವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಮಹಾಮಳೆಗೆ ತತ್ತರಿಸಿವೆ. ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗಿರುವ ಭತ್ತ ಹಾಗೂ ಇನ್ನಿತರ ಬೆಳೆಗಳು ಜಲಾವೃತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಮಲೆನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಧಾರಾಕಾರ ಮಳೆಯಿಂದಾಗಿ ಅಡಿಕೆ, ಕಾಳುಮೆಣಸು, ಕಾಫಿ, ಬೆಳೆಗಳು ಜಲಾವೃತಗೊಂಡಿವೆ.
ತುಮಕೂರು ಜಿಲ್ಲೆಯಲ್ಲೂ ಕಳೆದ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಮನೆಗಳಿಗೆ ಮತ್ತು ಜಮೀನುಗಳಿಗೆ ನೀರು ನುಗ್ಗಿ ನೂರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗಿದ್ದ ರಾಗಿ, ನಾಶವಾಗಿದೆ. ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿ ಬಿದ್ದಿದ್ದು, ಜನಜೀವನ ಸಂಪೂರ್ಣ ವ್ಯಸ್ತಗೊಂಡಿದೆ.
ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು, ಕುಣಿಗಲ್ ತಾಲ್ಲೂಕಿನಲ್ಲಿ ತೆಂಗಿನ ತೋಟ, ಅಡಿಕೆ ತೋಟಗಳು ಜಲಾವೃತಗೊಂಡಿವೆ. ಬೆವರು ಸುರಿಸಿ, ಬೆಳೆದ ಬೆಳೆ ಕೈಗೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.