ರೈತರ ಬಂಧನಕ್ಕೆ ಸಿಎಂ ಆಕ್ರೋಶ

ಬೆಂಗಳೂರು, ಫೆ. ೧೨- ರೈತರ ಹಕ್ಕಿಗಾಗಿ ನಾಳೆ ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ರೈತರನ್ನು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬಂಧಿಸಿರುವ ಮಧ್ಯಪ್ರದೇಶದ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ ರಾಜ್ಯದ ರೈತರನ್ನು ತಕ್ಷಣ ಬಿಡುಗಡೆ ಮಾಡಿ, ದೆಹಲಿಯ ಜಂತರ-ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದರು.
ರೈತರನ್ನು ಬೆದರಿಸಿ, ಬಂಧಿಸಿ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ರೀತಿಯ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗೀಳಿಯುತ್ತಾರೆ ಹೊರತು ಮಣ್ಣಿನ ಮಕ್ಕಳು ಹೋರಾಟ ನಿಲ್ಲುವುದಿಲ್ಲ ಎಂದು ಅವರು ತೀರುಗೇಟು ನೀಡಿದ್ದಾರೆ.
ಶಾಂತಿ ಸುವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ಇದ್ದರೆ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಅದನ್ನು ಬಿಟ್ಟು ದಮನ ದೌರ್ಜನ್ಯ ನಡೆಸಿ ರೈತರ ಬಾಯಿಮುಚ್ಚಿಸಬಾರದು ಎಂದು ಕಿಡಿಕಾರಿದ್ದಾರೆ.
ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಿಯಾಗಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರೈತರ ಬಗ್ಗೆ ಮೊದಲ ದಂಡ ಪ್ರಯೋಗ ಮಾಡುತ್ತದೆ ಎಂಬುದಕ್ಕೆ ಈ ಹಿಂದೆ ನಡೆಯುವ ಇತಿಹಾಸಗಳೇ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದ ಬಿಜೆಪಿ ಗೊಬ್ಬರ ಕೇಳಿದ ರೈತರನ್ನು ನಿದಯವಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವ ಸರ್ಕಾರ ಗುಂಡಿಕ್ಕಿ ಕೊಂದಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆದ ದೌರ್ಜನ್ಯದಲ್ಲಿ ಹಲವು ರೈತರು ಸಾವನ್ನಪ್ಪಿದ್ದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.