ರೈತರ ಪ್ರತಿ ಲೀಟರ್ ಹಾಲಿಗೆ ಮತ್ತೆ 2 ರೂ. ಹೆಚ್ಚಳ

ತುಮಕೂರು, ಮಾ. ೨೭- ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯು ಮಾ. ೧ ರಿಂದಲೇ ಪೂರ್ವಾನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ೨ ರೂ. ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಕಷ್ಟಕ್ಕೆ ನೆರವಾಗಿದೆ.
ಹಾಲು ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಮಾ. ೧ ರಿಂದಲೇ ಜಾರಿಗೆ ಬರುವಂತೆ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ ೨ ರೂ. ಹಾಗ ಸಂಘದ ನಿರ್ವಹಣೆಗಾಗಿ ಪ್ರತಿ ಕೆ.ಜಿ. ಹಾಲಿಗೆ ರೂ. ೦.೨೦ ಹೆಚ್ಚಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಕ್ಕೂಟವು ಕಳೆದ ಫೆ. ೧ ರಂದು ಪ್ರತಿ ಲೀಟರ್ ಹಾಲಿಗೆ ೨ ರೂ. ಹೆಚ್ಚಿಸಿ ಉತ್ಪಾದಕರಿಗೆ ೨೫ ರೂ. ನೀಡಲಾಗುತ್ತಿತ್ತು. ೨೦೨೦-೨೧ನೇ ಸಾಲಿನ ಅಂತ್ಯದಲ್ಲಿ ಹಾಲಿನ ಪುಡಿ ಹಾಗೂ ಬೆಣ್ಣೆಗೆ ಉತ್ತಮ ಧಾರಣೆ ದೊರಕಿರುವ ಹಿನ್ನೆಲೆಯಲ್ಲಿ ಒಕ್ಕೂಟವು ಲಾಭ ಗಳಿಸಿದ್ದು, ಕೋವಿಡ್-೧೯ ಸಾಂಕ್ರಾಮಿಕ ರೋಗದ ನಡುವೆಯೂ ಒಕ್ಕೂಟದ ಬೆಳವಣಿಗೆಗೆ ಶ್ರಮಿಸಿ, ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಆರ್ಥಿಕ ಸಹಾಯ ಮಾಡುವುದು ಒಕ್ಕೂಟದ ಧ್ಯೇವಾಗಿದೆ. ಹಾಗಾಗಿ ಮತ್ತೆ ೨ ರೂ.ಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹೊಸ ದರ ಮಾ. ೧ ರಿಂದಲೇ ಪೂರ್ವಾನ್ವಯವಾಗಲಿದೆ ಎಂದರು.
ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ೩.೫ ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ ೨೭ ರೂ., ಸಂಘಗಳಿಗೆ ೨೭.೯೩ ರಂತೆ ಹಾಗೂ ೪.೧ ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ ರೂ. ೨೮.೩೯ ರಂತೆ, ಸಂಘಗಳಿಗೆ ರೂ, ೨೯.೩೨ ರಂತೆ ನೀಡಲಾಗುವುದು. ಒಕ್ಕೂಟದಲ್ಲಿ ಶೇ. ೯೬ ಕ್ಕಿಂತಲೂ ಅಧಿಕ ಹಾಲು ೪.೧ ಜಿಡ್ಡಿನಾಂಶ ಇದ್ದು, ಸಂಘಗಳಿಗೆ ರೂ. ೨೯.೩೨ ಪೈಸೆಯಂತೆ ಪಾವತಿ ಮಾಡಬೇಕಾಗುತ್ತದೆ ಎಂದರು.
ಇದರಿಂದ ಒಕ್ಕೂಟಕ್ಕೆ ಪ್ರತಿದಿನ ಅಂದಾಜು ೧೬.೪೦ ಲಕ್ಷ ಸೇರಿದಂತೆ ಮಾಹೆಯಾನ ೪೩೫.೫೮ ಕೋಟಿ ಹೆಚ್ಚುವರಿ ಖರ್ಚು ಬರಲಿದೆ. ಪ್ರಸ್ತುತ ತುಮಕೂರು ಸಹಕಾರಿ ಹಾಲು ಒಕ್ಕೂಟದ ಈ ದರವು ರಾಜ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಮುಂತಾದ ಹಾಲು ಒಕೇಕೂಟಗಳು ನೀಡುತ್ತಿರುವ ದರಗಳಿಗಿಂತ ಹೆಚ್ಚಾಗಿದೆ ಎಂದ ಅವರು, ಕೋಲಾರ ಹಾಲು ಒಕ್ಕೂಟದ ದರಕ್ಕೆ ಸಮಾನಾಂತರವಾಗಿದೆ ಎಂದರು.
ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಹಾಲು ಉತ್ಪಾದಕ ಸಹಕಾರ ಸಂಘವು ಹೆಚ್ಚುವರಿ ಬಿಲ್‌ನ್ನು ತಯಾರಿಸಿ ಉತ್ಪಾದಕರಿಗೆ ಬಟವಾಡೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಒಕ್ಕೂಟಕ್ಕೆ ಮಾರ್ಚ ಅಂತ್ಯಕ್ಕೆ ಸರಾಸರಿ ೯.೫೦ ಕೋಟಿ ರೂ. ನಿವ್ವಳ ಲಾಭ ಬಂದಿದೆ ಎಂದು ಅವರು ತಿಳಿಸಿದರು.
ಒಕ್ಕೂಟದಲ್ಲಿ ಇನ್ನು ೭೭ ಕೋಟಿ ರೂ. ಮೌಲ್ಯದ ಹಾಲಿನ ಪೌಡರ್ ಮತ್ತು ಬೆಣ್ಣೆ ದಾಸ್ತಾನಿದೆ. ಸಮಯಕ್ಕೆ ಸರಿಯಾಗಿ ದಾಸ್ತಾನಿರುವ ಹಾಲಿನ ಪೌಡರ್ ಮತ್ತು ಬೆಣ್ಣೆ ಮಾರಾಟವಾಗುತ್ತಿದೆ ಎಂದು ಅವರು ಹೇಳಿದರು.
ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪೌಡರ್ ಪ್ರತಿ ತಿಂಗಳು ೫೦ ಸಾವಿರ ಕೆ.ಜಿ. ಬಳಕೆಯಾಗುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕ್ಷೀರಭಾಗ್ಯ ಸ್ಥಗಿತಗೊಂಡಿರುವುದ್ದು, ಅಗತ್ಯಕ್ಕೆ ತಕ್ಕಂತೆ ಹಾಲಿನ ಪೌಡರ್ ಮಾರಾಟ ಮಾಡಲಾಗುತ್ತಿದೆ. ಆದರೆ ಪೌಡರ್ ಬೇಡಿಕೆಯೇನೂ ಕಡಿಮೆಯಾಗಿಲ್ಲ ಎಂದರು.
ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಕಳೆದ ಮೂರು ತಿಂಗಳಿಂದ ನೀಡಲಾಗಿಲ್ಲ. ಸುಮಾರು ೨೪ ಕೋಟಿ ರೂ. ಪ್ರೋತ್ಸಾಹ ಧನದ ಮೊತ್ತ ಬಾಕಿಯಿದ್ದು, ಸದ್ಯದಲ್ಲೇ ಇದನ್ನು ರೈತರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಮುಲ್ ನಿರ್ದೇಶಕರಾದ ಹಳೆಮನೆ ಶಿವನಂಜಪ್ಪ, ಕೊಂಡವಾಡಿ ಚಂದ್ರಶೇಖರ್, ಎಸ್.ಆರ್. ಗೌಡ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.