ರೈತರ ಪ್ರತಿಭಟನೆ ಸುಖಾಂತ್ಯ ನಿರೀಕ್ಷೆ

ನವದೆಹಲಿ, ಡಿ. ೩೦- ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ತಿಂಗಳಿಗೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರ ಇಂದು ರೈತ ಸಂಘಟನೆಗಳ ಮುಖಂಡರೊಂದಿಗೆ ೬ನೇ ಸುತ್ತಿನ ಮಾತುಕತೆ ನಡೆಸಲಿದೆ.
ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ಒತ್ತಾಯಕ್ಕೆ ಕಟ್ಟುಬಿದ್ದು ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿವೆ. ಸಂಧಾನ ಮಾತುಕತೆಗೆ ರೈತಸಂಘಟನೆಗಳು ಒಪ್ಪಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಮಾತುಕತೆ ನಡೆಯಲಿದೆ.
ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಕನಿಷ್ಠ ಬೆಂಬಲ ಬೆಲೆ ನೀತಿಗೆ ಕಾನೂನಾತ್ಮಕ ರೂಪ ನೀಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ವಿಚಾರಗಳು ಕುರಿತು ಸರ್ಕಾರ ಹಾಗೂ ರೈತ ಮುಖಂಡರ ನಡುವೆ ವಿಸ್ತೃತ ಚರ್ಚೆ ನಡೆಯಲಿದೆ.
ನಿನ್ನೆ ನಡೆಯಬೇಕಾಗಿದ್ದ ಮಾತುಕತೆ ದಿನಾಂಕವನ್ನು ಒಂದು ದಿನದ ಮಟ್ಟಿಗೆ ಸರ್ಕಾರ ಮುಂದೂಡಿದ ಕಾರಣ ಇಂದು ಸಂಧಾನ ಮಾತುಕತೆ ನಡೆಯಲಿದೆ. ಈ ಮಾತುಕತೆ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ರೈಲ್ವೆ ಸಚಿವ ಪಿಯುಷ್ ಗೊಯಲ್ ಅವರು ಹಿರಿಯ ಬಿಜೆಪಿ ನಾಯಕ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ರೈತ ಮುಖಂಡರೊಂದಿಗೆ ನಡೆಯಲಿರುವ ಮಾತುಕತೆ ಸಂದರ್ಭದಲ್ಲಿ ನರೇಂದ್ರ ಸಿಂಗ್ ತೋಮರ್ ಪಿಯುಷ್ ಗೊಯಲ್ ಸರ್ಕಾರದ ಪರವಾಗಿ ಭಾಗವಹಿಸಲಿದ್ದಾರೆ. ಇಂದು ನಡೆಯಲಿರುವ ಸಂಧಾನ ಮಾತುಕತೆ ಫಲಪ್ರದವಾಗಲಿದೇ ಎಂಬ ವಿಶ್ವಾಸ ವನ್ನು ತೋಮರ್ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಐದು ಸುತ್ತಿನ ಮಾತುಕತೆಗಳು ವಿಫಲವಾಗಿದ್ದು ಇಂದು ನಡೆಯಲಿರುವ ಸಂಧಾನ ಮಾತುಕತೆಗಳ ಕುರಿತು ರೈತಾಪಿ ಸಮುದಾಯ ತೀವ್ರ ಕುತೂಹಲದಿಂದ ಎದುರು ನೋಡುತ್ತಿದೆ.
ರೈತಪರ ಸಂಘಟನೆಗಳು ಮತ್ತು ಸರ್ಕಾರ ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದರಿಂದ ಇದುವರೆಗೆ ನಡೆದ ಮಾತುಕತೆಗಳು ಯಾವುದೇ ಫಲ ನೀಡಿಲ್ಲ. ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ರೈತರು ದೆಹಲಿಯ ಸುತ್ತಮುತ್ತ ಇರುವ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ದಿನಗಳಿಂದ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಈ ನಡುವೆ ವಿರೋಧ ಪಕ್ಷಗಳ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.