ರೈತರ ಪಶುಗಳ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಶೀಘ್ರ ನೆರವಾಗಲು ಕರೆ

ವಿಜಯಪುರ ಸೆ.13 : ಪಶುಗಳ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಪಶು ವೈದ್ಯರಿಗೆ ಸಲಹೆ ನೀಡಿದ್ದಾರೆ.
ನಗರದ ಲಿ ಗ್ರ್ಯಾಂಡಿ ಹೊಟೇಲ್ ದಲ್ಲಿ ಇಂದು ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶುವೈದ್ಯರ ಸಂಘ, ಜಿಲ್ಲಾ ಘಟಕ ವತಿಯಿಂದ ಆಯೋಜಿಸಲಾಗಿದ್ದ ಪಶುವೈದ್ಯರ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ,ಪಶುವೈದ್ಯರು ರೈತರಿಗೆ ಬೆನ್ನೆಲುಬಾಗಿ ನಿಂತು ಅವರಿಗೆ ಸಕಾಲಕ್ಕೆ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈತರ ಅಕಾಲಿಕ ಪಶುಗಳ ಸಾವಿಗೂ ಸೂಕ್ತ, ಸಕಾಲಕ್ಕೆ ಪರಿಹಾರ ದೊರೆಯಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಜಿಲ್ಲೆಯಲ್ಲಿ ನೀರಾವರಿ,ಕ್ಷೀರ ಕ್ರಾಂತಿಯಾಗಬೇಕು. ಪ್ರಾಣಿ ವೇದನೆಗೆ ತಕ್ಷಣ ಪಶುವೈದ್ಯರು ಸ್ಪಂದಿಸಬೇಕು. ಪಶುಗಳ ಮತ್ತು ರೈತರ ಅನುಕೂಲಕ್ಕಾಗಿ ಕೃತಕ ಬಿಟ್ಟು ನೈಸರ್ಗಿಕ ಪರಿಹಾರೋಪಾಯಗಳಿಗೆ ಗಮನ ನೀಡಬೇಕು. ರೈತರ ಮಕ್ಕಳು ಹೆಚ್ಚು ಪಶುವೈದ್ಯರಾಗಲು,ತರಬೇತಿಗೊಳಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪಶುಸಂಗೋಪನೆ , ಕುರಿ-ಮೇಕೆ ಸಾಕಾಣಿಕೆ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ತಿಳಿಹೇಳುವಂತೆ ಅವರು ಸಲಹೆ ನೀಡಿ ಕೆಎಂಎಫ್ ಸಹಕಾರ ಸಹ ಮುಖ್ಯವಾಗಿದೆ ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಹಗೀರದಾರ ಅವರು ಜಿಲ್ಲೆಯ 500ಗ್ರಾಮಗಳನ್ನು ಆಯ್ಕೆ ಮಾಡಿ ರೈತರ ಮನೆಬಾಗಿಲಿಗೆ ತಲುಪಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಉಚಿತ ಸೌಲಭ್ಯ, ಈ ಮೂಲಕ ತಳಿ ಉನ್ನತೀಕರಣ, ಉತ್ಪಾದನೆ ಹೆಚ್ಚಳಕ್ಕೆ ನೆರವಾಗುತ್ತಿದ್ದೇವೆ.ಜಾನುವಾರುಗಳ ಅಧಿಕೃತ ಅಂಕಿ ಅಂಶಕ್ಕಾಗಿ 2.10 ಲಕ್ಷ ಜಾನುವಾರುಗಳಿಗೆ ಕಿವಿಯೋಲೆ ಹಾಕಲಾಗುತ್ತಿದೆ.ಪಶುಸಂಜೀವಿನಿ ಆಂಬ್ಯುಲೆನ್ಸ್ ಮಂಜೂರು ಆಗಿದೆ.ಕುರಿ-ಆಡು ಜಂತುನಾಶಕ ಔಷಧಿ ಹಾಗೂ ಲಸಿಕಾ ಕಾರ್ಯಕ್ರಮ ಕ್ಕೆ ಅನುದಾನದ ಅವಶ್ಯಕತೆ, ಪಶುವೈದ್ಯರ ಹೆಚ್ಚಿನ ಹುದ್ದೆ ಖಾಲಿ ಇವೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಪ್ರಾಯೋಜನಾ ನಿರ್ದೇಶಕರು ಡಾ.ಮಂಜುನಾಥ ಪಾಳೇಗಾರ,ಪಶುಆರೋಗ್ಯ ಮತ್ತು ಜೈವಿಕ ಸಂಸ್ಥೆ ನಿರ್ದೇಶಕರು ಡಾ. ಎಸ್.ಎಂ. ಭೈರೇಗೌಡ, ಉಪಸ್ಥಿತರಿದ್ದರು.