ರೈತರ ನೆರವಿಗೆ ಬಾರದ ಸರ್ಕಾರ: ಮೋಮಿನ್

ಚಿಂಚೋಳಿ,ಸೆ.12- ಸಂಕಷ್ಟದಲ್ಲಿರುವ ರೈತರ ನೇರವಿಗೆ ಬಾರದ ಸರ್ಕಾರ ಈ ಕೂಡಲೇ ರೈತರ ಸಾಲಮನ್ನ ಮಾಡಬೇಕು ಹಾಗೂ ಬೆಳೆಹಾನಿಗೆ ಪ್ರತಿ ಎಕರೆಗೆ 25ಸಾವಿರ ಪರಿಹಾರ ನೀಡಬೇಕು ಎಂದು ಸುಲೇಪೇಟ ಗ್ರಾಮದ ಜೆಡಿಎಸ್ ಮುಖಂಡರಾದ ಮೋಹಿನ್ ಮೋಮಿನ್ ಆಗ್ರಹಿಸಿದ್ದಾರೆ.
ಚಿಂಚೋಳಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾಳಾಗಿದ್ದು, ಜಿಲ್ಲೆಯಲ್ಲಿ ಬೆಳೆಗಳು ನಾಶವಾಗಿ ಮಳೆಯ ಆರ್ಭಟಕ್ಕೆ ಬೆಳೆ ಹಾನಿಯಾಗಿದೆ, ರೈತರು ಬಿತ್ತನೆಗಾಗಿ ಲಕ್ಷಾಂತರ ರೂ.ಹಾಕಿ ಬೆಳೆದಿರುವ ಹತ್ತಿ, ತೊಗರಿ, ಸೇರಿದಂತೆ ಇತರೆ ಬೆಳೆಗಳು ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಸತತವಾಗಿ 2 ವರ್ಷಗಳ ಕಾಲ ಸಾಂಕ್ರಾಮಿಕ ರೋಗಗಳ ಹಾವಳಿ ನಡುವೆ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.ಈಗ ಮತ್ತೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಸಾಲ ಮಾಡಿ ಬೀಜ ಹಾಗೂ ರಸಗೊಬ್ಬರಗಳನ್ನ ಖರೀದಿ ಮಾಡಿ ಬಿತ್ತನೆ ಮಾಡಿದ ರೈತರು ಈಗ ಮಳೆರಾಯನ ಆರ್ಭಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿಜೆಪಿ ಪಕ್ಷದವರು ರೈತರ ಹೆಸರಿನ ಮೇಲೆ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ ಹೀಗಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಪರಿಹಾರ ಕಲ್ಪಿಸಬೇಕು. ಅಲ್ಲದೆ ಮಳೆಯಿಂದಾಗಿ ಸಾಕಷ್ಟು ಬಡಜನರ ಮನೆಗಳು ಹಾಳಾಗಿವೆ ಇದನ್ನು ಸಹ ಸಮೀಕ್ಷೆ ಮಾಡಿ ಯಾವುದೇ ಬಡಜನರಿಗೆ ಅನ್ಯಾಯ ಆಗಲಾರದಂತೆ ಪರಿಹಾರ ವಿತರಿಸಬೇಕು. ಮನೆ ಕಳೆದುಕೊಂಡವರಿಗೆ ಕೇವಲ ಹತ್ತು ಸಾವಿರ ರೂಪಾಯಿ ಸರ್ಕಾರ ಘೋಷಣೆ ಮಾಡಿರುವುದು ಅವೈಜ್ಞಾನಿಕವಾಗಿದೆ. ತಕ್ಷಣ ಅವರಿಗೆ 50 ಸಾವಿರ ರೂ.ಗಳನ್ನು ನೀಡಿ ಸರ್ಕಾರದಿಂದ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ