ರೈತರ ನೆರವಿಗೆ ಅಗ್ರಿವಾರ್ ರೂಂ

ಬೆಂಗಳೂರು, ಏ. ೨೮- ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಕೃಷಿ ಇಲಾಖೆ ಅಗ್ರಿವಾರ್ ರೂಂನ್ನು ಆರಂಭಿಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
೧೪ ದಿನಗಳ ಜನತಾ ಕರ್ಫ್ಯೂ ಸಂದರ್ಭದಲ್ಲಿ ರೈತರಿಗಾಗಲೀ, ಕೃಷಿ ಚಟುವಟಿಕೆಗಳಿಗಾಗಲಿ ಯಾವುದೇ ತೊಂದರೆಯಾಗದಿರಲಿ ಎಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಂ ಆರಂಭಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಅಗ್ರಿವಾರ್ ರೂಂ ಆರಂಭಿಸಿರುವಂತೆ ಈಗಲೂ ಅಗ್ರಿವಾರ್ ರೂಂ ಆರಂಭಿಸಿ ರೈತರಿಗೆ ಯಾವುದೇ ಅಧಿಕಾರಿಗಳು ಕೃಷಿ ಉತ್ಪನ್ನಗಳ ಸಾಗಾಣಿಕೆ, ಚಟುವಟಿಕೆ ಸಂದರ್ಭದಲ್ಲಿ ತೊಂದರೆ ಕೊಡದಂತೆ ಎಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕೃಷಿ ಕೇಂದ್ರ ಕಛೇರಿಯಲ್ಲಿ ಈ ಅಗ್ರಿವಾರ್ ರೂಂ ಆರಂಭಿಸಲಾಗಿದ್ದು, ರೈತರುಗಳು ತಮ್ಮ ಸಮಸ್ಯೆಗಳಿಗೆ ಹಾಗೂ ದೂರು ದುಮ್ಮಾನಗಳಿಗೆ ಸಹಾಯವಾಣಿ: ೦೮೦-೨೨೨೧೦೨೩೭, ೦೮೦- ೨೨೨೧೨೮೧೮ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಅಗ್ರಿವಾರ್ ರೂಂ ಯಶಸ್ವಿಯಾಗಿ ರೈತರಿಗೆ ನೆರವಾಗಿತ್ತು. ಅ ದರಂತೆ ಈ ಬಾರಿಯೂ ಕೃಷಿ ಸಮಸ್ಯೆಗಳ ಬಗ್ಗೆ ಬೆಳೆಗಾರರ ಮಧ್ಯೆ ಸಂಪರ್ಕ ಸೇತುವೆಯಾಗಿ ಈ ಅಗ್ರಿವಾರ್ ರೂಂ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ರೈತರು ಬೆಳೆದ ಹಣ್ಣು, ತರಕಾರಿ, ಹೂ ಸೇರಿದಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸೇರಿದಂತೆ ಎಲ್ಲದರ ಬಗ್ಗೆಯೂ ಈ ಸಹಾಯವಾಣಿಯಿಂದ ರೈತರು ನೆರವು ಪಡೆಯಬಹುದು ಎಂದರು.