’ರೈತರ ಧ್ವನಿಯಾಗಿದ್ದ ಎನ್.ಡಿ.ಸುಂದರೇಶ್

ಶಿವಮೊಗ್ಗ, ಆ. ೨೪: ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಾದ ಎನ್.ಡಿ.ಸುಂದರೇಶ್ರವರ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಇಂದು ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಎನ್.ಡಿ.ಸುಂದರೇಶ್ ಪ್ರತಿಷ್ಠಾನ ಆಯೋಜಿಸಿತ್ತು.
ಹಿರಿಯ ಪತ್ರಕರ್ತ, ಸಾಮಾಜಿಕ ಹೋರಾಟಗಾರರೂ ಆದ ಕಾಮ್ರೇಡ್ ಎಂ. ಲಿಂಗಪ್ಪರವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎನ್.ಡಿ.ಸುಂದರೇಶ್ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಸುಂದರೇಶ್, ಸುಧಾಂಶು, ದುರ್ಗಿಗುಡಿ ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಹೆಚ್.ಎಂ.ಮೋಹನ್ ಸೇರಿದಂತೆ ಮೊದಲಾದವರಿದ್ದರು.
ಅಪರೂಪದ ಹೋರಾಟಗಾರ: ’ಎನ್.ಡಿ.ಸುಂದರೇಶ್ರವರು ಸಾಮಾಜಿಕ ಕಳಕಳಿ ಹೊಂದಿದ್ದ ಧೀಮಂತ ಹೋರಾಟಗಾರರಾಗಿದ್ದರು. ರೈತರ ಹಿತಾಸಕ್ತಿ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದರು. ರೈತರ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ, ರೈತರಿಗಾಗಿ ತಮ್ಮ ಜೀವನ ಮುಡುಪಾಗಿಟ್ಟರು’ ಎಂದು ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.
ರೈತರಿಗೆ ಆಗುತ್ತಿದ್ದ ಹತ್ತು ಹಲವು ಅನ್ಯಾಯಗಳ ವಿರುದ್ದ ಎನ್.ಡಿ.ಸುಂದರೇಶ್ ಧ್ವನಿ ಎತ್ತುವ ಮೂಲಕ, ಬೀದಿಗಿಳಿದು ಹೋರಾಟ ನಡೆಸಿದರು. ಇಂತಹ ನಿಷ್ಕಲ್ಮಶ, ಪ್ರಾಮಾಣಿಕ, ಸಾಮಾಜಿಕ ತತ್ಪರತೆಯ ಹೋರಾಟಗಾರರು ಹುಟ್ಟಿ ಬರುವುದೇ ಅಪರೂಪವಾಗಿದೆ ಎಂದು ಹೇಳಿದ ಕಾಮ್ರೇಡ್ ಎಂ. ಲಿಂಗಪ್ಪರವರು, ಇದೆ ವೇಳೆ ಎನ್.ಡಿ.ಸುಂದರೇಶ್ ರವರೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.
ಗ್ರಂಥಾಲಯಕ್ಕೆ ಕೊಡುಗೆ: ಜನ್ಮದಿನೋತ್ಸವದ ಅಂಗವಾಗಿ ಎನ್.ಡಿ.ಸುಂದರೇಶ್ ಪ್ರತಿಷ್ಠಾನವು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆ ನೀಡಿತು. ಜೊತೆಗೆ ಸುರಭಿ ಉಜ್ವಲಸಂಸ್ಥೆಯ ಮಕ್ಕಳು ಮತ್ತು ಮಹಿಳೆಯರಿಗೆ ಉಪಹಾರದ ವ್ಯವಸ್ಥೆ ಮಾಡಿತ್ತು.