ರೈತರ ದಿಕ್ಕು ತಪ್ಪಿಸುತ್ತಿರುವ ಪ್ರತಿಪಕ್ಷಗಳು : ತೋಮರ್

ನವದೆಹಲಿ ಸೆ 22. ಕೃಷಿ ಮಸೂದೆಗಳ ಬಗ್ಗೆ ಪ್ರತಿಪಕ್ಷಗಳು ಕಪೋಲಕಲ್ಪಿತ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶದ ರೈತರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನೇರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿಂದು ಮಾತನಾಡಿದ ಅವರು, ಈ ಮಸೂದೆ ಗಳಿಂದಾಗಿ ಕನಿಷ್ಠ ಬೆಂಬಲ ದರ ಅಥವಾ ಕೃಷಿ ಉತ್ಪನ್ನಗಳ ಸಂಗ್ರಹ ವಿಚಾರ ದಲ್ಲಿ ರೈತರಿಗೆ ಯಾವುದೇ ರೀತಿಯ ಬಾಧಕವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರ ಈಗಾಗಲೇ ಹಿಂಗಾರು ಹಂಗಾಮಿನ 6 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದು ಈ ಮೂಲಕ ರೈತಾಪಿ ಸಮುದಾಯದ ಪರವಾಗಿ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.

ರೈತರು ಕೃಷಿ ಸಾಗುವಳಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಈ ಮಸೂದೆಗಳು ಅನುಕೂಲ ಕಲ್ಪಿಸಲಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ತಮ್ಮ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ರೂಪದಲ್ಲಿ ಸುಮಾರು 7 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಅಂಕಿಅಂಶ ಸಮೇತ ವಿವರಿಸಿದರು.

2009ರಿಂದ 2014ರ ವರೆಗಿನ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ರೈತರಿಗೆ ನೀಡಲಾಗಿದ್ದ ಕನಿಷ್ಠ ಬೆಂಬಲ ಬೆಲೆಗಿಂತ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದುಪ್ಪಟ್ಟು ನೆರವು ನೀಡಿದೆ ಎಂದು ನರೇಂದ್ರ ಸಿಂಗ್ ತೋಮರ್ ವಿವರಿಸಿದರು.

ಸ್ವಾಮಿನಾಥನ್ ಆಯೋಗದ ಶಿಫಾರಸುಗಳು ಅನ್ವಯ ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ರೂಪಿಸಲಾಗಿದೆ. ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ ಕೃಷಿ ಮಸೂದೆ ಗಳಿಂದ ಕನಿಷ್ಠ ಬೆಂಬಲ ಬೆಲೆ ಅಥವಾ ಎಪಿಎಂಸಿ ಕಾಯ್ದೆ ನಿಯಮ ಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.