ರೈತರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ನಡ್ಡಾ ಟೀಕೆ

ನವದೆಹಲಿ ಸೆಪ್ಟಂಬರ್ 16.ಕೃಷಿ ವಲಯದ ಅಭಿವೃದ್ಧಿ ಮತ್ತು ಪುನಶ್ಚೇತನಕ್ಕಾಗಿ ಸಂಸತ್ತಿನಲ್ಲಿ ಮಂಡಿಸಿರುವ ಮೂರು ಮಸೂದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಈ ಮಸೂದೆಗಳ ಬಗ್ಗೆ ಅಪಸ್ವರ ಎತ್ತಿರುವ ಕಾಂಗ್ರೆಸ್ ನಾಯಕರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಖಂಡಿಸಿದ್ದಾರೆ.

ಈ ಮಸೂದೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು ದ್ವಂದ್ವ ನಿಲುವನ್ನು ತಾಳಿದ್ದಾರೆ .ಜನರನ್ನು ವಿಶೇಷವಾಗಿ ರೈತರನ್ನು ದಿಕ್ಕುತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು,
ಸಂಸತ್ತಿನಲ್ಲಿ ಮಂಡಿಸಲಾಗಿರುವ ಮೂರು ಮಸೂದೆಗಳು ಅತ್ಯಂತ ಕ್ರಾಂತಿಕಾರಕ ಹಾಗೂ ದೂರದೃಷ್ಟಿಯುಳ್ಳ ಮಸೂದೆ ಗಳಾಗಿವೆ ಎಂದು ತಿಳಿಸಿದರು.

ರೈತರ ಉತ್ಪನ್ನಗಳಿಗೆ ಯೋಗ್ಯ ದರ ಒದಗಿಸುವುದು, ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದಕ್ಕೆ ಮಸೂದೆಗಳು ಒತ್ತು ನೀಡಿದೆ ಎಂದರು. ಎಂದರು.

ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ದರ ಕುಸಿದಾಗ ಸರ್ಕಾರವೇ ಮಧ್ಯ ಪ್ರವೇಶ ಮಾಡಿ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಖರೀದಿಸುವುದಕ್ಕೂ ಮಸೂದೆಗಳಲ್ಲಿ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದರು.

ಕೃಷಿ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಈ ಮಸೂದೆಗಳು ಪ್ರೋತ್ಸಾಹದಾಯಕವಾಗಿದೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಸೂದೆಗಳನ್ನು ಮಂಡಿಸಲಾಗಿದ್ದು ಇದಕ್ಕೆ ಒಪ್ಪಿಗೆ ಪಡೆದ ನಂತರ ಪರಿಣಾಮಕಾರಿ ಜಾರಿಗೆ ಸರ್ಕಾರ ಮುಂದಾಗಲಿದೆ ಎಂದು ಜೆ ಪಿ ನಡ್ಡಾ ತಿಳಿಸಿದರು.