ರೈತರ ತಂಟೆಗೆ ಬಂದರೆ ಸುಮ್ಮನಿರಲ್ಲ:ಪುರುಷೋತ್ತಮಗೌಡ

ಬಳ್ಳಾರಿ, ಸೆ.16: ಮಾನವ ಹಕ್ಕುಗಳ ಸಂಘ ಎಂದು ಹಳ್ಳಿಗಳಲ್ಲಿ ವಿನಾಕಾರಣ ರೈತರ ವಿಷಯದಲ್ಲಿ ಮೂಗು ತೂರಿಸಿ ಸಮಸ್ಯೆಯನ್ನುಂಟು ಮಾಡಲು ಮುಂದಾದರೆ ಅದನ್ನು ತುಂಗಭದ್ರ ರೈತ ಸಂಘ ಸಹಿಸುವುದಿಲ್ಲವೆಂದು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಾಲೂಕಿನ ಮೋಕಾ ಗ್ರಾಮದ ಗೋದಾಮಿನಲ್ಲಿ ರೈತರು ಭತ್ತ ಸಂಗ್ರಹಿಸಿಟ್ಟಿದ್ದರು. ಮತ್ತೆ ಅದನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗಲು ಬಂದಾಗ ಮಾನವ ಹಕ್ಕುಗಳ ಸಂಘದವರೆಂದು ಲೋಕೇಶ್ ಎಂಬುವವರು ಗೋದಾಮಿನ ಮಾಲೀಕರ ಅಣ್ಣ ತಮ್ಮಂದಿರ ಜಗಳ ಮಧ್ಯೆ ತಂದು ರೈತರಿಗೆ ಅಡ್ಡಿಪಡಿಸಿದ್ದರು. ಅಲ್ಲದೆ ರೈತರಿಗೆ ಇದಕ್ಕೆ ಅನುಮತಿ ಇದೆಯಾ, ಬಿಲ್ ಎಲ್ಲಿ, ಡಿಸಿಯವರನ್ನು ಕೇಳಿದೆಯಾ ಎಂದು ರೈತರಿಗೆ ಬೆದರಿಕೆ ಹಾಕಿದ್ದರು. ಸಂಕಷ್ಟಕ್ಕೆ ಒಳಗಾಗಿದ್ದ ರೈತರು ನಮ್ಮ ಬಳಿ ಬಂದಿದ್ದರಿಂದ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಈಗ ಭತ್ತವನ್ನು ಗೋದಾಮಿನಿಂದ ಬಿಡುಗಡೆ ಮಾಡಿದೆ.
ಭತ್ತ ಇಟ್ಟಿದ್ದ ರೈತರು ಭತ್ತ ಬಿಡಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಲ್ಲದೆ ಲೋಕೇಶ್ ಅವರು ವಿನಾಕಾರಣ ತಮಗೆ ಕಿರುಕುಳ ನೀಡಿದ್ದು, ಸ್ಥಳೀಯ ಪೊಲೀಸರೂ ಅವರಿಗೆ ಸಹಕಾರ ಮಾಡಿದ್ದರ ಬಗ್ಗೆ ಪಂಪನಗೌಡ, ನೆಟ್ಟಕಂಠಪ್ಪ, ರಘು, ಬಸವರಾಜ್, ಚೆನ್ನಬಸಪ್ಪ, ದೇಸಾಯಿ ಶ್ರೀನಿವಾಸ ಮೊದಲಾದವರು ದೂರಿದರು.
ಲೋಕೇಶ್ ಅವರು ವಿನಾಕಾರಣ ಹಳ್ಳಿಗಳಲ್ಲಿ ರೈತರ ಸಣ್ಣ ಪುಟ್ಟ ಸಮಸ್ಯೆಗಳಿದ್ದಾಗ ಅವುಗಳಲ್ಲಿ ಮೂಗು ತೂರಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಇಂದು ಎಸ್ಪಿ ಅವರಿಗೆ ದೂರು ನೀಡಲಿದೆಂದು ಪುರುಷೋತ್ತಮಗೌಡ ತಿಳಿಸಿದರು.
ಮಾನವ ಹಕ್ಕುಗಳನ್ನು ರಕ್ಷಿಸುವವರು ನೊಂದವರಿಗೆ ನ್ಯಾಯ ಕೊಡಿಸಬೇಕು, ಅದು ಬಿಟ್ಟು ಇವರೇ ವಿನಾಕಾರಣ ರೈತರಿಗೆ ಕಿರುಕುಳ ಕೊಡುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಜಾಲಿಹಾಳ್ ಶ್ರೀಧರ್, ಮುದ್ದನಗೌಡ, ರಾಜಸಾಬ್, ಮೊದಲಾದವರು ಉಪಸ್ಥಿತರಿದ್ದರು.