ರೈತರ ಜೊತೆ ಬಿಸಿಪಾ ಸಂವಾದ

ಕೋಲಾರ, ಜ. ೬- ರಾಜ್ಯದಲ್ಲಿ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೃಷಿ ಇಲಾಖೆ ಹಮ್ಮಿಕೊಂಡಿರುವ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಕೋಲಾರದಲ್ಲಿ ನಡೆಯಿತು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ತೋಟವೊಂದನ್ನು ಹಸಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು.
ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಬೇವಹಳ್ಳಿ ಗ್ರಾಮದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಪ್ರಾರಂಭವಾಗಿದೆ. ಇನ್ನು ಕಾರ್ಯಕ್ರಮವನ್ನು ರಾಗಿ ಕಣಕ್ಕೆ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು. ಅಲ್ಲದೆ ಬೇವಹಳ್ಳಿ ಗ್ರಾಮದ ಅಶ್ವಥಮ್ಮ ಎಂಬುವರ ತೋಟದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ರಾಗಿ ಕಣಕ್ಕೆ ಪೂಜೆ ಮಾಡಿದ ನಂತರ ಸಮಗ್ರ ಕೃಷಿ ಪದ್ದತಿಯನ್ನು ವೀಕ್ಷಣೆ ಮಾಡಿದರು. ನಂತರ ರೇಷ್ಮೆ ಸಾಕಾಣಿಕೆಯನ್ನು ವೀಕ್ಷಣೆ ಮಾಡಿದ ಸಚಿವರು ಹಸುವಿನಲ್ಲಿ ಹಾಲು ಕರೆಯುವುದರ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸಿದರು.
ಇನ್ನು ಇದೇ ವೇಳೆ ಕೃಷಿ ಚಟುವಟಿಕಗಳಿಗೆ ಸಂಬಂಧಿಸಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಆಲೂಗಡ್ಡೆ ನಾಟಿ ಮಾಡುವುದು, ಟೊಮ್ಯಾಟೊ ನಾಟಿ ಮಾಡುವುದು ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ನಡೆಸಿ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನವನ್ನು ನೀಡಿದರು. ನಂತರ ಕೊತ್ತಂಬರಿ ಚೆಲ್ಲಿ ತೋಟದಲ್ಲಿ ಉಳುಮೆ ಮಾಡಿದರು. ಈ ವೇಳೆ ಸಂಸದ ಎಸ್.ಮುನಿಸ್ವಾಮಿ, ಸಚಿವ ಎಚ್.ನಾಗೇಶ್ ಸಹ ಉಳುಮೆ ಮಾಡುವುದರ ಮೂಲಕ ಸಚಿವರಿಗೆ ಸಾಥ್ ನೀಡಿದರು. ಇನ್ನು ಇಡೀ ದಿನ ರೈತರ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲಿರುವ ಸಚಿವರು, ದೇವಸ್ಥಾನಕ್ಕೆ ಭೇಟಿ, ಎತ್ತಿನ ಗಾಡಿ ಸವಾರಿ. ರೈತರ ಜೊತೆ ಸಂವಾದ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿ ಸತ್ಯಭಾಮ ಮತ್ತಿತರರು ಉಪಸ್ಥಿತರಿದರು. ಕಾರ್ಯಕ್ರಮಕ್ಕೆ ನೂರಾರು ರೈತರು ಆಗಮಿಸಿ ಸಚಿವರ ಕಾರ್ಯವನ್ನು ಶ್ಲಾಘಿಸಿದರು .