ರೈತರ ಜೀವಾಳವಾದ ಹೈನೋದ್ಯಮ ಉಳಿಸಲು ಸಹಕರಿಸಿ

ಕೋಲಾರ,ಮೇ,೨೫- ಮುಂಗಾರು ಸಮೀಪಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿಟ್ಟಪ್ಪನಹಳ್ಳಿ ಗ್ರಾಮದಲ್ಲಿ ಎಂಪಿಸಿಎಸ್ ವತಿಯಿಂದ ಹಾಲು ಉತ್ಪಾದಕರಿಗೆ ರಾಸುಗಳ ಮೇವಿಗಾಗಿ ಉಚಿತವಾಗಿ ಜೋಳವನ್ನು ಎಂಪಿಸಿಎಸ್ ಕಾರ್ಯದರ್ಶಿ ವಿಟ್ಟಪ್ಪನಹಳ್ಳಿ ವೆಂಕಟೇಶ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘಕ್ಕೆ ೧೦ ಕ್ವಿಂಟಾಲ್ ಜೋಳ ಬಂದಿದ್ದು, ಪ್ರತಿವರ್ಷದಂತೆಯೇ ಈ ಬಾರಿಯೂ ಸಹ ಹಾಲು ಉತ್ಪಾದಕರಿಗೆ ಜೋಳವನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಇದರ ಜತೆಗೆ ಫೀಡ್ ೧೨೪೦ರೂಗಳಿದ್ದು, ಅದನ್ನು ೧೧೪೦ರೂಗಳಿಗೆ ನೀಡಲಾಗುತ್ತಿದೆ. ಅಲ್ಲದೆ ಖನಿಜ ಮಿಶ್ರಣ (ಮಿನರಲ್ ಮಿಕ್ಸ್ಚರ್) ನೀಡುತ್ತಿರುವುದಾಗಿ ಹೇಳಿದರು. ಮುಂಗಾರು ಸಮೀಪಿಸಿದ್ದು, ಸದ್ಯ ಜೋಳವನ್ನು ವಿತರಣೆ ಮಾಡಿರುವುದರಿಂದಾಗಿ ಮೇವು ಬೆಳೆದುಕೊಳ್ಳಲು ಸಹಕಾರಿಯಾಗಲಿದೆ. ಹಾಲು ಉತ್ಪಾದಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವೇ ರೈತರ ಬದುಕಿಗೆ ಆಧಾರವಾಗಿದೆ, ರೈತರ ಆತ್ಮಹತ್ಯೆಗಳು ಜಿಲ್ಲೆಯಲ್ಲಿ ಕಂಡು ಬರದಿರಲು ಹೈನುಗಾರಿಕೆಯೇ ಕಾರಣ ಎಂದು ತಿಳಿಸಿದ ಅವರು, ಜನತೆ ಹೈನೋದ್ಯಮದಲ್ಲಿ ಹೆಚ್ಚು ಪಾಲ್ಗೊಳ್ಳುವ ಮೂಲಕ ಹೆಚ್ಚಿನ ಹಾಲು ಉತ್ಪಾದನೆ ಮಾಡಿ ಲಾಭ ಗಳಿಸಿ ಎಂದು ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷ ವಿ.ಆರ್.ಮಂಜುನಾಥ್ ಮಾತನಾಡಿ, ಸಂಘವು ಲಾಭದಾಯಕವಾಗಿ ನಡೆಯುತ್ತಿದ್ದು, ಪ್ರತಿವರ್ಷ ಬೋನಸ್, ಉಡುಗೊರೆ ನೀಡುತ್ತಾ ಬರಲಾಗುತ್ತಿದೆ. ಬಿಎಂಸಿ, ಹಾಲು ಕರೆಯುವ ಯಂತ್ರಗಳಿದ್ದು, ಸ್ವಂತ ಕಟ್ಟಡವನ್ನು ಹೊಂದಿರುವುದಾಗಿ ತಿಳಿಸಿದರು.
ಎಂಪಿಸಿಎಸ್‌ಅನ್ನು ತಾಲ್ಲೂಕಿನಗೆ ಮಾದರಿಯಾಗಿ ಮುನ್ನಡೆಸಲಾಗುತ್ತಿದ್ದು, ಇದಕ್ಕೆ ರೈತರ ಸಹಕಾರ ಅಗತ್ಯವಿದೆ, ಗುಣಮಟ್ಟದ ಹಾಲು ಸೊಸೈಟಿಗೆ ನೀಡುವ ಮೂಲಕ ಸಹಕಾರ ನೀಡಬೇಕು ಎಂದ ಅವರು, ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಿ ಎಂದು ಕೋರಿದರು
ಈ ಸಂದರ್ಭದಲ್ಲಿ ಎಂಪಿಸಿಎಸ್ ಉಪಾಧ್ಯಕ್ಷ ಎನ್.ಮಂಜುನಾಥ್, ನಿರ್ದೇಶಕರಾದ ಮುನಿವೆಂಕಟಪ್ಪ, ವಿ.ಮುನಿಯಪ್ಪ, ವೆಂಕಟರಾಮಪ್ಪ, ಪಿ.ರಾಮಪ್ಪ, ಪಿ.ಶಂಕರಪ್ಪ, ಎಸ್.ಚಂದ್ರಪ್ಪ ಸಿ.ಬಿ.ರಮಾದೇವಿ, ರೂಪಾದೇವಿ, ವಿ.ಇ.ಶ್ರೀನಿವಾಸ್, ನಾರಾಯಣಮ್ಮ, ಹಾಲು ಪರೀಕ್ಷಕ ನಾರಾಯಣಸ್ವಾಮಿ, ಸಿಬ್ಬಂದಿ ಮಾರ್ಕೊಂಡಪ್ಪ, ಮಂಜುನಾಥ್, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.