ರೈತರ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಗ್ರಾಮಗಳಿಗೆ ಧಾವಿಸಿಃ ಪ್ರಭು ಚವ್ಹಾಣ್

ವಿಜಯಪುರ, ನ.18-ರೈತರ ಜಾನುವಾರುಗಳ ಆರೋಗ್ಯ ಚಿಕಿತ್ಸೆಗೆ ಸಂಬಂಧಪಟ್ಟಂತೆ ಪಶುವೈದ್ಯರು ಹಾಗೂ ಅಧಿಕಾರಿಗಳು ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಸಕಾಲಕ್ಕೆ ಸ್ಪಂದಿಸುವಂತೆ ಪಶುಪಾಲನೆ, ಹಜ್ ಹಾಗೂ ವಕ್ಫ್ ಖಾತೆ ಸಚಿವ ಪ್ರಭು ಚವ್ಹಾಣ್ ಅವರು ಸೂಚನೆ ನೀಡಿದ್ದಾರೆ.
ಬೂತನಾಳ ಕೆರೆ ಪಕ್ಕದ ಕೆಎಂಎಫ್ ಕಚೇರಿ ಸಭಾಂಗಣದ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಪಶುವೈದ್ಯಕೀಯ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು ರೈತರ ಜಾನುವಾರುಗಳ ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬರುತ್ತಿದ್ದು, ತಕ್ಷಣ ಪಶುವೈದ್ಯರು ಗ್ರಾಮಾಂತರ ಪ್ರದೇಶಗಳಿಗೆ ಮತ್ತು ರೈತರ ಮನೆಬಾಗಿಲಿಗೆ ತಲುಪಿ ತೊಂದರೆಯಲ್ಲಿರುವ ಅವರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿ ಇಲಾಖೆಯ ಉಪ ನಿರ್ದೇಶಕರು ಸಹ ತಾಲೂಕಾವಾರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಸಹ ನಡಸುವಂತೆ ಅವರು ಸೂಚನೆ ನೀಡಿದರು.
ಜಾನುವಾರುಗಳಿಗೆ ಕಾಲುಬಾಯಿ ರೋಗ ಚಿಕಿತ್ಸೆ, ಪಶು ಸಂಜೀವಿನಿ ಮೊಬೈಲ್ ವ್ಯಾನ್ ಮೂಲಕ ಶಸ್ತ್ರಚಿಕಿತ್ಸೆಗೆ ಸೂಕ್ತ ನೆರವು, ರೈತರಿಂದ ಪೂರೈಸಲಾಗುವ ಹಾಲಿಗೆ ಸಕಾಲಕ್ಕೆ ಪ್ರೋತ್ಸಾಹ ಧನ ನೀಡುವಂತೆ ತಿಳಿಸಿದ ಅವರು ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸುವ ಮೂಲಕ ಸರ್ಕಾರ ಮತ್ತು ಇಲಾಖೆಯ ಕೀರ್ತಿಗೆ ಶ್ರಮಿಸುವಂತೆ ಅವರು ಸೂಚನೆ ನೀಡಿದರು.
ಎಲ್‍ಎಸ್‍ಡಿ ರೋಗಬಾಧೆ ಲಸಿಕಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಅತೀ ಕಡಿಮೆ ಸಾಧನೆ ಮಾಡಿದ್ದು, ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು. ಪಶು ಸಂಜೀವಿನಿ ಶಸ್ತ್ರಚಿಕಿತ್ಸೆಯಲ್ಲಿ ಧಾರವಾಡ ಜಿಲ್ಲೆ ಕಡಿಮೆ ಪ್ರಗತಿ ಸಾಧಿಸಿದ್ದು, ನವೆಂಬರ್ ಅಂತ್ಯರೊಳಗೆ ಎಫ್‍ಎಮ್‍ಬಿ ಲಸಿಕಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಹಮ್ಮಿಕೊಂಡು ಗುರಿಗೆ ತಕ್ಕಂತೆ ಸೂಕ್ತ ಪ್ರಗತಿ ಸಾಧಿಸಲು ಅವರು ಸೂಚಿಸಿದರು.
ರೈತರಿಗೆ ಸಕಾಲಕ್ಕೆ ಸ್ಪಂದಿಸಲು ಅಧಿಕಾರಿಗಳು ತಮ್ಮ ಮೊಬೈಲ್ ನಂಬರ್‍ಗಳನ್ನು ಪ್ರಚುರಪಡಿಸಿ ದೂರುಗಳನ್ನು ಸ್ವೀಕರಿಸಬೇಕು. ಆಯಾ ಗ್ರಾಮಗಳು ಮತ್ತು ತಾಲೂಕುವಾರು ಭೇಟಿ ನೀಡಿ ಕೈಗೊಂಡ ಚಿಕಿತ್ಸಾಕ್ರಮದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ ಅವರು ರೈತರ ಜಾನುವಾರುಗಳಿಗೆ ಔಷಧಿಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ಜಿಲ್ಲಾ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಃ ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಸಚಿವ ಶ್ರೀ ಪ್ರಭು ಚವ್ಹಾಣ್ ಅವರು ರೈತರ ಮನೆಬಾಗಿಲಿಗೆ ಸೇವೆ ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸೂಚನೆ ನೀಡಿದರು.
ಜಾನುವಾರುಗಳ ಕೃತಕ ಗರ್ಭಧಾರಣೆ, ಕಾಲು ಬಾಯಿ ಬೇನೆಗೆ ಸೂಕ್ತ ಚಿಕಿತ್ಸೆ, ಆರೋಗ್ಯ ಶಿಬಿರ, ರೈತರಿಗೆ ತರಬೇತಿ, ಗೋಶಾಲೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿದ ಸಚಿವರು ರೈತರಿಗೆ ಮೇವು ಕಿಟ್‍ಗಳ ವಿತರಣೆ, ಔಷಧಿ ವಿತರಣೆ ಸೇರಿದಂತೆ ಇಲಾಖೆಯ ಇತರೆ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿ ಅತ್ಯುತ್ತಮ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ವಕ್ಫ್ ಅಧಿಕಾರಿಗಳೊಂದಿಗೆ ಚರ್ಚೆಃ ಜಿಲ್ಲಾ ವಕ್ಪ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು ಯಾವುದೇ ಪರಿಸ್ಥಿತಿಯಲ್ಲಿ ವಕ್ಫ್ ಆಸ್ತಿ ಒತ್ತುವರಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ ಅವರು ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳ ವಿವರ, ಸರ್ವೇ ಮಾಹಿತಿ, ವಿವಿಧ ಸಂಸ್ಥೆಗಳಿಗೆ ಸಾಲ ಸೌಲಭ್ಯ, ಲೀಸ್‍ಗೆ ನೀಡಿದ ಆಸ್ತಿಗಳ ವಿವರ ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ವಕ್ಫ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಶಾಸಕ ಸೋಮನಗೌಡ ಪಾಟೀಲ್ (ಸಾಸನೂರ), ಪಶುಪಾಲನೆ ಇಲಾಖೆಯ ಆಯುಕ್ತ ಬಸವರಾಜೇಂದ್ರ, ಕೆಎಮ್‍ಎಫ್ ಅಧ್ಯಕ್ಷ ಸಂಭಾಜಿ ಮಿಸಾಳೆ, ಕೆಎಮ್‍ಎಫ್ ನಿರ್ದೇಶಕರಾದ ಎಸ್.ಬಿ ಪಾಟೀಲ್, ಸಿದ್ಧಣ್ಣ ಕಡಪಟ್ಟಿ, ಕರಿಗೌಡರ, ಗುರು ಚಲವಾದಿ, ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ ದಿಕ್ಷೀತ್, ಪಶು ಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಪ್ರಾಣೇಶ ಜಹಾಗೀರದಾರ ಉಪಸ್ಥಿತರಿದ್ದರು.