ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ ಮಾಡುವಂತೆ ಸಿರಗಾಪೂರ ಆಗ್ರಹ

ಕಲಬುರಗಿ: ನ.23:ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಮುಂಗಾರು ಬೆಳೆ ನಷ್ಟಕ್ಕೆ ರೈತರ ಖಾತೆಗೆ ವಿಮೆ ಹಣ ಜಮಾ ಮಾಡುವಂತೆ ಸರಕಾರ ವಿಮಾ ಕಂಪನಿಗಳಿಗೆ ಸೂಚಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಬಲವಾಗಿ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜುಲೈ ತಿಂಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಗೆ ರೈತರು ತೊಗರಿ ಬೆಳೆಗೆ ಪ್ರತಿ ಹೆಕ್ಟೇರಿಗೆ ಸುಮಾರು ರೂ 1200,ಉದ್ದು ಬೆಳೆಗೆ ರೂ 800, ಹೆಸರು ಬೆಳೆಗೆ 950, ಸೋಯಾಬೀನ್ ಗೆ ರೂ.760 ರಂತೆ ವಿಮೆ ಕಂಪನಿಗಳಿಗೆ ಹಣ ಪಾವತಿಸಿದ್ದಾರೆ.ಅದರಂತೆ ತೊಗರಿ, ಹತ್ತಿ, ಸೋಯಾಬೀನ್,ಉದ್ದು, ಹೆಸರು ಬೆಳೆಗಳುಹಾಳಾಗಿವೆ.ಅತಿವೃಷ್ಟಿಯಿಂದ ಈ ಬಾರಿ ಬಹುತೇಕ ಬೆಳೆಗಳು ನಷ್ಟವಾಗಿವೆ.ಅದರಲ್ಲೂ ಬಿಸಿಲು ನಾಡು ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಎರಡೆರಡು ಬಾರಿ ಬಿತ್ತನೆ ಮಾಡಲಾಗಿದೆ.ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.ಒಂದು ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 10 ಸಾವಿರ ಖರ್ಚು ಮಾಡಿದ್ದಾರೆ.ಹೇಕ್ಟರಿಗೆ ಸರಾಸರಿ 25 ಸಾವಿರ ಖರ್ಚಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮಳೆ ಗಾಳಿಗೆ ಕಬ್ಬು,ಹತ್ತಿ ಹಾಗೂ ಬಾಳೆ ಬೆಳೆಗಳಿಗೂ ಹಾನಿಯಾಗಿದೆ.ಕೆಲವೆಡೆ ತೊಗರಿಗೆ ನೆಟೆ ರೋಗ ಕಾಣಿಸಿಕೊಂಡಿದೆ.ಇದರಿಂದ ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು.ಪ್ರತಿ ಹೇಕ್ಟರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು.ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕು.ಸಾಲ ಮಾಡಿ ರೈತರು ವಿಮೆ ಕಂಪನಿಗಳಿಗೆ ಹಣ ಕಟ್ಟಿ 4, ತಿಂಗಳು ಕಳೆದರೂ ಇನ್ನೂ ವಿಮೆ ಹಣ ಬಂದಿಲ್ಲ. ರಥ ಕೂಡಲೇ ಸರಕಾರ ರೈತರ ಖಾತೆಗಳಿಗೆ ವಿಮೆ ಹಣ ಜಮಾ ಮಾಡುವಂತೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.