ರೈತರ, ಕಾರ್ಮಿಕರ ಹಕ್ಕೊತ್ತಾಯಗಳಿಗಾಗಿ ಏ. 5ರಂದು ದೆಹಲಿ ಚಲೋ

ಕಲಬುರಗಿ,ಮಾ.16: ರಾಷ್ಟ್ರ ವಿರೋಧಿ ಕಾರ್ಪೋರೇಟ್ ಪರ ಬಿಜೆಪಿ ಸರ್ಕಾರದ ಕೋಮುವಾದಿ ನೀತಿಗಳ ವಿರುದ್ಧ ಕಾರ್ಮಿಕರ ಮತ್ತು ರೈತರ ಹಕ್ಕುಗಳಿಗಾಗಿ ಮಾರ್ಚ್ 18ರಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಸಜ್ಜನ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 5ರಂದು ದೆಹಲಿ ಚಲೋ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಏಪ್ರಿಲ್ 5ರಂದು ಸುಮಾರು ಹತ್ತು ಲಕ್ಷ ಕಾರ್ಮಿಕರು, ರೈತರು ದೆಹಲಿಯಲ್ಲಿ ಬೃಹತ್ ಹಕ್ಕೊತ್ತಾಯ ಮತ್ತು ಬೇಡಿಕೆಗಳ ಕಾರ್ಯಕ್ರಮ ನಡೆಯಲಿದೆ ಎಂದರು.
ಕಳೆದ 75 ವರ್ಷಗಳಲ್ಲಿ ಭಾರತೀಯರು ಕಟ್ಟಿ ಬೆಳೆಸಿರುವ ಎಲ್ಲ ಮೌಲ್ಯಗಳು ಹಾಗೂ ಅಭಿವೃದ್ಧಿ ಇಲ್ಲದಾಗಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಯಂತ್ರಿತ ಬಿಜೆಪಿ ಸರ್ಕಾರ ಇದೆ. ದೇಶದ ಆರ್ಥಿಕತೆಯು ತೀವ್ರ ಸಂಕಷ್ಟ ಎದುರಿಸುತ್ತಿದೆ. ದೇಶದ ಆಹಾರ ಭದ್ರತೆ, ತಯಾರಿಕ ವಲಯದ ಸಾಮಥ್ರ್ಯ, ಪ್ರಜಾಸತ್ತಾತ್ಮಕ, ಜಾತ್ಯಾತೀತ ಮತ್ತು ಒಕ್ಕೂಟವಾಗಿ ರಾಜಕೀಯ ವ್ಯವಸ್ಥೆ, ನಮ್ಮ ಸಂವಿಧಾನಿಕ ಹಕ್ಕುಗಳು ಎಲ್ಲವೂ ಗಂಭೀರ ದಾಳಿಗೆ ಒಳಪಟ್ಟಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
35000ರೂ.ಗಳ ಕನಿಷ್ಠ ವೇತನ, ಕನಿಷ್ಠ ಹತ್ತು ಸಾವಿರ ರೂ.ಗಳ ಪಿಂಚಣಿ ಖಾತ್ರಿಪಡಿಸುವಂತೆ, ಗುತ್ತಿಗೆ ಕಾರ್ಮಿಕ ಪದ್ದತಿ ಹಾಗೂ ಅಗ್ನಿಪಥ ಯೋಜನೆ ರದ್ದುಪಡಿಸುವಂತೆ, ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಕೊಡುವಂತೆ, ರೈತರು, ಕೃಷಿ ಕೂಲಿಕಾರರ ಸಾಲ ಮನ್ನಾ ಮಾಡುವಂತೆ, 60 ವರ್ಷ ತುಂಬಿದವರಿಗೆ ಪಿಂಚಣಿ ನೀಡುವಂತೆ, ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ 2022ನ್ನು ರದ್ದುಪಡಿಸುವಂತೆ, ರೈತ ವಿರೋಧಿ ಕೃಷಿ ವಿರೋಧಿ ರಾಜ್ಯ ಕೃಷಿ ಕಾಯ್ದೆಗಳನ್ನು ಮತ್ತು ಭೂ ಸ್ವಾಧೀನ ಕಾಯ್ದೆಗಳನ್ನು ರದ್ದುಪಡಿಸುವಂತೆ, ರೈತ, ಕೃಷಿ, ಕೂಲಿಕಾರರು ಸೇರಿದಂತೆ ಎಲ್ಲ ಗ್ರಾಮೀಣ ಸಮುದಾಯಗಳನ್ನು ಋಣಮುಕ್ತಗೊಳಿಸಲು ರಾಷ್ಟ್ರೀಯ ಋಣಮುಕ್ತ ಕಾನೂನು ಜಾರಿಗೆ ತರುವಂತೆ ಅವರು ಒತ್ತಾಯಿಸಿದರು.
ಎಲ್ಲರಿಗೂ ಉದ್ಯೋಗ ಭದ್ರತೆ ಮತ್ತು ಖಾತ್ರಿ ಒದಗಿಸುವಂತೆ, ಕೆಲಸದ ದಿನಗಳನ್ನು 200 ದಿನಗಳಿಗೆ ಹಾಗೂ ದೈನಿಕ 600ರೂ.ಗಳ ಕನಿಷ್ಠ ವೇತನ ಸಹಿತ ಹೆಚ್ಚಿಸುವಂತೆ, ನಗರ ಉದ್ಯೋಗ ಖಾತ್ರಿ ಶಾಸನ ರೂಪಿಸುವಂತೆ, ಸಾರ್ವಜನಿಕ ಉದ್ಯಮಗಳ ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ನಿಲ್ಲಿಸಿ ರಾಷ್ಟ್ರೀಯ ನಗದೀಕರಣ ಕೊಳವೆ ಮಾರ್ಗವನ್ನು ರದ್ದುಪಡಿಸುವಂತೆ ಅವರು ಆಗ್ರಹಿಸಿದರು.
ಬೆಲೆ ಏರಿಕೆ ತಡೆಗಟ್ಟುವಂತೆ, ಸಾರ್ವಜನಿಕ ವಿತರಣ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ 14 ಅಗತ್ಯ ವಸ್ತುಗಳನ್ನು ಒಳಗೊಂಡು ವಿಸ್ತರಿಸುವಂತೆ, ಸರ್ವರಿಗೂ ವಸತಿ ಖಾತ್ರಿಪಡಿಸುವಂತೆ ಮುಂತಾದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ದೆಹಲಿ ಚಲೋ ಚಳುವಳಿಗಾಗಿ ಈಗಾಗಲೇ ಜಿಲ್ಲೆಯಿಂದ ರೈಲಿನ ಮೂಲಕ ಹೋಗಲು 285 ಜನರು ಟಿಕೆಟ್ ಬುಕ್ ಮಾಡಿದ್ದಾರೆ. ಇನ್ನೂ 500 ಜನರು ಪಾಲ್ಗೊಳ್ಳುವರು. ಏಪ್ರಿಲ್ 3ರಂದು ದೆಹಲಿ ಚಲೋ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಸಾಯಿಬಣ್ಣ ಗುಡುಬಾ, ಗೌರಮ್ಮ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.