ರೈತರ ಕಣ್ಣೀರು ತರಿಸಿದ ಈರುಳ್ಳಿ
ಕಂಗಲಾದ ಈರುಳ್ಳಿ ಬೆಳೆಗಾರರು


ಕೊಟ್ರೇಶ್ ಉತ್ತಂಗಿ
ಕೊಟ್ಟೂರು, ಫೆ.26: ರಾಜ್ಯಾದ್ಯಂತ ಈರುಳ್ಳಿ ಬೆಲೆಯೂ ದಿನದಿಂದ ದಿನಕ್ಕೆ ದರದಲ್ಲಿ ಪಾತಾಳಕ್ಕೆ ಇಳಿಕೆಯಾಗತ್ತಿದೆ. ಇದರಿಂದ ಈರುಳ್ಳಿ ಬೆಳೆದ ಬೆಳೆಗಾರರು  ಕಣ್ಣೀರಲ್ಲಿ ಕೈ ತೊಳಿಯುವಂತಹ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ತಾಲೂಕಿನಲ್ಲಿ ಮೊತಿಕಲ್ ತಾಂಡ, ದೂಪದಹಳ್ಳಿ ತಾಂಡ, ಹ್ಯಾಳ್ಯಾ, ಹರಾಳು, ಅಯ್ಯನಹಳ್ಳಿ ಹೀಗೆ ನಾನಾ ಭಾಗಗಳಲ್ಲಿ  ಹಿಂಗಾರು ಬೆಳೆಯಾಗಿ ಸುಮಾರು ಸಾವಿರಾರು ಎಕರೆ ಪ್ರದೇಶದಲ್ಲಿ ಈರುಳ್ಳಿಯನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ರೈತರಿಗೆ ಉತ್ತಮ ಗುಣಮಟ್ಟದ ಇಳುವರಿ ಬಂದಿದ್ದು, ಈರುಳ್ಳಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆಯಲ್ಲಿ ಇಳಿಕೆ ಕಾಣುವುದರಿಂದ ಅಂದರೆ ಕೆಜಿಗೆ 6 ರಿಂದ 8 ರೂಪಾಯಿಗಳ ಕೆಳ ಹಂತದಲ್ಲಿ ಮಾರಾಟ ಮಾಡುವಂತಹ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ರೈತರು ಕೈಯಲ್ಲಿ ಬೆಣ್ಣೆ ಹಿಡಿದುಕೊಂಡು ನಿಲ್ಲುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿಯನ್ನು ಈರುಳ್ಳಿ ಬೆಳೆಗಾರರು ಅನುಭವಿಸುತ್ತಿದ್ದಾರೆ.
ನಾವು ಎರಡು ಎಕರೆ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದೇವು ಸುಮಾರು ಒಂದು ಲಕ್ಷದ ಹಣ ಖರ್ಚು ಮಾಡಿ ನಾಲ್ಕು ತಿಂಗಳಿಂದ ಶ್ರಮವಹಿಸಿ ಈರುಳ್ಳಿ ಬೆಳೆದಿದ್ದೇವೆ, ಮಾರುಕಟ್ಟೆಯಲ್ಲಿ ತೀರ ಈರುಳ್ಳಿ ದರವು ಕಡಿಮೆ  ಇರುವುದರಿಂದ ಕಟಾವು ಮಾಡಿದರೆ ಮೈ ಮೇಲೆ ಮತ್ತಷ್ಟು ಖರ್ಚು ಬರುವಂತಹ ಪರಿಸ್ಥಿತಿ ಎದುರಿಸುವಂತಹ  ಚಿಂತೆಯಲ್ಲಿ ನಾವಿದ್ದೇವೆ ಎಂದು ತಮ್ಮ  ರೈತ ಶಿವರಾಜ್  ತಮ್ಮ ಅಳಲನ್ನು ತೋಡಿಕೊಂಡರು.
ನಾವು ಒಂದು ಎಕರೆ ಹೊಲದಲ್ಲಿ ಈರುಳ್ಳಿ ಬೀಜವನ್ನು ಬಿತ್ತನೆ ಮಾಡಿದ್ದೇವು, ಬಿತ್ತನೆ ಮಾಡಿ ಕಟಾವು ಹಂತದವರೆಗೆ ಒಟ್ಟಾರೆ  ಸುಮಾರು 50,000 ಖರ್ಚು ಮಾಡಲಾಗಿದೆ, ಈರುಳ್ಳಿಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಬಿಟ್ಟಾಗ ದರದಲ್ಲಿ  ಅತೀ ಕಡಿಮೆ ಬೆಲೆ ದೊರೆತ ಹಿನ್ನೆಲೆಯಲ್ಲಿ ಮೈ ಮೇಲೆ ಸಾಲ ಮಾಡಿ ಕೂಲಿಕಾರರಿಗೆ ಹಣ ನೀಡಿದ್ದೇವೆ ಎಂದು ರೈತ ಮುನಿಂದ್ರ ತಮ್ಮ ಅಳಲನ್ನು ಹೊರ ಹಾಕಿದರು.
ಸರ್ಕಾರವು ಮಧ್ಯಪ್ರವೇಶಿಸಿ ಆದಷ್ಟು ಬೇಗ ಈರುಳ್ಳಿ ಬೆಲೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಈರುಳ್ಳಿ ದರವು ಏರಿಕೆ ಮಾಡಬೇಕು ಎಂಬುದು ಬೆಳೆಗಾರರ ಆಶಯವಾಗಿದೆ.
ಮಾರುಕಟ್ಟೆಗೆ ಲಗ್ಗೆ:
ಬೆಂಗಳೂರು ಮಾರುಕಟ್ಟೆಗೆ ಮಹಾರಾಷ್ಟ್ರ, ಬೆಳಗಾವಿ ಕಡೆಯಿಂದ ಅತಿ ಹೆಚ್ಚಿನ ಮಟ್ಟದಲ್ಲಿ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಪರಿಣಾಮವಾಗಿ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ ನಮ್ಮ ಭಾರತ ದೇಶದಿಂದ ಹೊರ ದೇಶಗಳಿಗೆ ರಪ್ತು ನಿಲ್ಲಿಸಿದ ಹಿನ್ನೆಲೆ ಬೆಲೆಯಲ್ಲಿ ಕಡಿಮೆ ಕಾಣುತ್ತಿದೆ. ಮಹಾರಾಷ್ಟ್ರದ  ದಪ್ಪ ಗಡ್ಡೆಯು  ಕೆಜಿಗೆ ಕೇವಲ 10 ರಿಂದ 12 ರೂ ಗಳಿಗೆ ಮಾರಾಟವಾದರೆ, ಇನ್ನು ಕರ್ನಾಟಕದ ಈರುಳ್ಳಿ ದಪ್ಪಗಡ್ಡೆ 6 ರಿಂದ 8 ರೂಪಾಯಿಗೆ ಮಾರಾಟವಾಗುತ್ತಿದೆ.
ನಾವು ಸುಮಾರು 3 ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದೇವು, ಈಗಾಗಲೇ ಕಟಾವು ಮಾಡಿ 400 ಪಾಕೆಟ್ ಕ್ಕೂ ಹೆಚ್ಚು ಈರುಳ್ಳಿ ತುಂಬಿದ್ದೇವೆ ಮಾರುಕಟ್ಟೆಯಲ್ಲಿ ಬೆಲೆಯು ಕಡಿಮೆ ಇದೆ, ನಾವು ಮಾಡಿದ ಖರ್ಚಿಗೆ ಸರಿಸಮವಾಗುತ್ತಿದೆ ಇಲ್ಲವೋ ಎಂಬ ಆತಂಕದಲ್ಲಿ ನಾವಿದ್ದೇವೆ, ಹೀಗಾದರೆ ನಮ್ಮಂತ ರೈತರು ಬದುಕುವುದಾದರೂ ಹೇಗೆ
ರಾಜು ಟಿ
ಈರುಳ್ಳಿ ಬೆಳೆಗಾರರು
ಭಾರತ ದೇಶದಿಂದ ಬೇರೆ ದೇಶಗಳಿಗೆ ಈರುಳ್ಳಿಯನ್ನು ರಫ್ತುಗೊಳಿಸಿದರೆ  ಈರುಳ್ಳಿ ದರದಲ್ಲಿ ವ್ಯತ್ಯಾಸ ಕಾಣಬಹುದು, ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ಮದ್ಯೆ ಪ್ರವೇಶಿಸಿ ಈರುಳ್ಳಿ ದರ ಹೆಚ್ಚಳ ಆಗುವಂತೆ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಈರುಳ್ಳಿ ಬೆಳೆಗಾರರ ಸಂಘದಿಂದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು.

ಸಿದ್ದೇಶ್
ರಾಜ್ಯ ಈರುಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರು.

ಈಗಾಗಲೇ ಈರುಳ್ಳಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಡುತ್ತಿದೆ ರಫ್ತು ಇಲ್ಲದ ಪರಿಣಾಮವಾಗಿ ಖರೀದಿದಾರರು ತುಂಬಿಸಲು ಮುಂದೆ ಬರುತ್ತಿಲ್ಲ ಹೀಗಾಗಿ  ಬೆಲೆಯಲ್ಲಿ ಇಳಿಕೆಯಾಗಿದೆ
ಉದಯ್ ಕುಮಾರ್
ಶ್ರೀ ಸಾಯಿ ಟ್ರೇಡರ್ಸ್ ಅಂಗಡಿ ಮಾಲೀಕರು ಬೆಂಗಳೂರು

ಬಾಕ್ಸ್
ಈರುಳ್ಳಿ ದರ
ದೊಡ್ಡ 600-800
ಮದ್ಯ: 500-600
ಸಣ್ಣ:   200-400