ರೈತರ ಆರ್ಥಿಕ ಸದೃಢತೆಗೆ ಸಹಕಾರಿ ಸಂಘ ಪಾತ್ರ ಮುಖ್ಯ

ನವಲಗುಂದ,ನ.20: ಸಹಕಾರಿ ಸಂಘದಲ್ಲಿ ಪ್ರತಿಯೊಬ್ಬ ರೈತರು ಭಾಗಿಯಾಗಿ ದಿನನಿತ್ಯ ವ್ಯವಹಾರವನ್ನು ಸಂಘದ ಮುಖಾಂತರ ಮಾಡಿದಾಗ ಸಂಘದ ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಾಪುಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ಕೆ.ಸಿ.ಸಿ ಬ್ಯಾಂಕ್ ಶಾಖೆಯ ಆವರಣದಲ್ಲಿ 69 ನೇ ಸಹಕಾರ ಸಪ್ತಾಹದ ಧ್ಯೆಯ ಭಾರತ 75 ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರ ಸಂಘದಲ್ಲಿ ಅನೇಕ ರೈತಪರ ಯೋಜನೆಗಳು ಇದ್ದು ತಾಲೂಕಿನಲ್ಲಿರುವ 40 ಕೃಷಿ ಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಂಘ, ನೀರು ಬಳಕೆದಾರರ ಸಂಘದಿಂದ ಗ್ರಾಮೀಣ ಮಟ್ಟದಲ್ಲಿ ಸಹಕಾರ ನೀಡಿ ರೈತರಿಗೆ ಟ್ರ್ಯಾಕ್ಟರ್ ಸಾಲ, ಹೈನುಗಾರಿಕೆ ಸಾಲ, ಕೃಷಿ ಸಾಲ, ಸ್ವಸಹಾಯ ಗುಂಪು ಸೇರಿದಂತೆ ಅನೇಕ ಯೋಜನೆಗಳು ಅನುಕೂಲಕರವಾಗಿವೆ ಎಂದರು.
ರೈತರು ಸಹಕಾರ ಸಂಘವನ್ನು ಉಳಿಸಿ ಬೆಳೆಸುವಂತಹ ಕೆಲಸವಾಗಬೇಕು. ರೈತರಿಗೆ ಅನುಕೂಲ ತಕ್ಕಂತೆ ಸಹಕಾರ ಸಂಘವು ನಡೆದುಕೊಳ್ಳುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಸಹಕಾರ ಸಪ್ತಾಹದ ನಾಲ್ಕನೇ ದಿನದ ಉದ್ಟಾಟನೆ ಕಾರ್ಯಕ್ರಮವನ್ನು ಉದ್ಟಾಟಿಸಿ ಸಹಕಾರ ಸಂಘಗಳು ಮೊದಲಿಗಿಂತ ವಿಭಿನ್ನವಾಗಿ ಕಾರ್ಯವನ್ನು ನಿರ್ವಹಿಸುತ್ತಿವೆ. ಸರಕಾರ ಸಹಕಾರಿ ಸಂಘಗಳಲ್ಲಿ ಎಲ್ಲಾ ರೈತರಿಗೆ ಸಾಲದ ಸೌಲಭ್ಯವನ್ನು ದೊರಕಿಸಿಕೊಡಬೇಕು. ರಾಷ್ಟ್ರೀಯ ಬ್ಯಾಂಕಗಳಲ್ಲಿ ರೈತರಿಗೆ ನೀಡುವಂತಹ ಸಾಲದ ಮೀತಿಯಂತೆ ಸಹಕಾರಿ ಸಂಘದಲ್ಲಿಯೂ ನೀಡಿ ರೈತರ ಆರ್ಥಿಕತೆ ಬಲವರ್ಧನೆಗೆ ಸಹಕರಿಸಬೇಕೆಂದರು.
ಧಾರವಾಡ ಕೆ.ಸಿ.ಸಿ ಬ್ಯಾಂಕ ನಿವೃತ್ತ ವ್ಯವಸ್ಥಾಪಕ ಅಶೋಕ ಸೋಬಾನದ ಸಹಕಾರ ಸಪ್ತಾಹದ ಉಪನ್ಯಾಸ ನೀಡಿದರು.
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉತ್ತಮವಾಗಿ ಸಾಲ ವಸೂಲಾತಿ ಮಾಡಿದ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಸಾಲ ಪಡೆಯುತ್ತಿರುವ ಮಹಿಳಾ ಸ್ವ ಸಹಾಯ ಸಂಘಗಳಿಗೆ ಚೆಕ್ ವಿತರಿಸಿದರು.
ಸಹಕಾರಿ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ, ನಿರ್ಧೇಶಕ ಪ್ರತಾಪ ಚವ್ಹಾಣ, ಸದುಗೌಡ ಪಾಟೀಲ, ಕಲ್ಲನಗೌಡ ಫಕ್ಕೀರಗೌಡ, ಚಂಬಣ್ಣ ಹಾಳದೋಟರ, ಎ.ಬಿ. ಹಿರೇಮಠ, ಬಿ.ಎಸ್. ಕುರಹಟ್ಟಿ, ನಾಗನಗೌಡ ಪಾಟೀಲ, ಕೆ.ಸಿ.ಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕೆ ಕೆ. ಮುನಿಯಪ್ಪ, ಸಹಕಾರ ಅಭಿವೃದ್ದಿ ಅಧಿಕಾರಿ ಎಸ್.ವಿ. ಶಲವಡಿ, ಬ್ಯಾಂಕ ನಿರೀಕ್ಷಕ ಜಿ.ಜಿ. ಫಕ್ಕೀರಗೌಡ್ರ, ಪ್ರಾ.ಕೃ.ಪ. ಸಂಘಗಳ ಅಧ್ಯಕ್ಷ ಆರ್.ಬಿ.ಭುಜಂಗನವರ, ಎಸ್.ಎಮ್.ಚಿಕ್ಕಮಠ ಇತರರು ಇದ್ದರು.