ರೈತರ ಆತ್ಮಹತ್ಯೆ ತಡೆಗೆ ಆಗ್ರಹ: ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

ಬೀದರ್: ಸೆ.9:ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ರದ್ದುಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ದಿಲ್‍ಶನ್ ಅವರಿಗೆ ಸಲ್ಲಿಸಿದರು.

ಮಳೆ ಅಭಾವದಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ದೋಪಾದಿಯಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ವಿದ್ಯುತ್ ಅಭಾವದಿಂದ ರೈತರ ಪಂಪ್‍ಸೆಟ್‍ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದ್ದು, ಅದಾಗದಂತೆ ನೋಡಿಕೊಳ್ಳಬೇಕು. ಹಗಲು ಹೊತ್ತಿನಲ್ಲಿ ಸತತ ಏಳು ಗಂಟೆ ವಿದ್ಯುತ್ ಪೂರೈಸಬೇಕು. ರಾಜ್ಯದಲ್ಲಿ ಇದುವರೆಗೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತಂಕಕಾರಿ ಸಂಗತಿ. ಇದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಕಿಸಾನ್ ಸಮ್ಮಾನ್ ಯೋಜನೆ ತಡೆಹಿಡಿಯುತ್ತಿರುವುದು ಸರಿಯಾದ ಕ್ರಮವಲ್ಲ. ‘ವಿದ್ಯಾನಿಧಿ’ ರದ್ದುಪಡಿಸಿ ರೈತರ ಮಕ್ಕಳಿಗೆ ಅನ್ಯಾಯ ಮಾಡಲಾಗಿದೆ. ‘ಭೂಸಿರಿ’, ‘ಶ್ರಮ ಶಕ್ತಿ’, ‘ರೈತ ಸಂಪದ’, ‘ಜಿಲ್ಲೆಗೊಂದು ಗೋಶಾಲೆ’, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಕ್ಷೀರ ಸಮೃದ್ಧಿ ಸಹಕಾರ ಯೋಜನೆ ರದ್ದುಪಡಿಸಲು ನಿರ್ಧರಿಸಿರುವುದು ದುರದೃಷ್ಟಕರ ಎಂದು ಹೇಳಿದರು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಪಕ್ಷದ ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ, ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ, ಮುಖಂಡರಾದ ಬಾಬುವಾಲಿ, ಕುಶಾಲ ಪಾಟೀಲ ಗಾದಗಿ, ಸೂರಜ್ ಸಿಂಗ್ ಠಾಕೂರ, ಅಶೋಕ ಪಾಟೀಲ, ಮಹೇಶ, ಪೀರಪ್ಪ ಔರಾದ್, ರಾಜಶೇಖರ ಪಾಟೀಲ ಅಷ್ಟೂರ, ರಾಜಶೇಖರ ನಾಗಮೂರ್ತಿ, ಸುಭಾಷ ಮಡಿವಾಳ, ರೋಶನ್ ವರ್ಮಾ, ವಿಜಯಕುಮಾರ ಎ. ಪಾಟೀಲ ಗಾದಗಿ, ರಾಜೇಂದ್ರ ಬಿ.ಪೂಜಾರಿ, ವೆಂಕಟರಾವ ಚಿದ್ರೆ, ಪ್ರಕಾಶ ಮರಕಲ್, ದೀಪಕ್ ಬಿ. ಗಾದಗೆ, ಸುನಿಲ್ ಗೌಳಿ, ರಾಜಕುಮಾರ, ಸುದರ್ಶನ್ ಗಾದಗೆ ಇತರರು ಹಾಜರಿದ್ದರು.