ರೈತರ ಆತ್ಮಹತ್ಯೆ : ಜಿಲ್ಲಾಧಿಕಾರಿಗಳ ಹೇಳಿಕೆಗೆ ರೂಪಾ ಶ್ರೀನಿವಾಸ ಖಂಡನೆ

ರಾಯಚೂರು.ಡಿ.೦೪- ರೈತ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೇನನ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ರೂಪಾ ಶ್ರೀನಿವಾಸ ಅವರು, ಎಸಿ ರೂಂನಲ್ಲಿ ಕುಳಿತು, ರೈತರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಬೆಳೆದ ಬೆಳೆಯನ್ನೇ ತಿಂದು ಬದುಕುವ ನಾವು, ಅವರ ಆತ್ಮಹತ್ಯೆಗೆ ಸಂಬಂಧಿಸಿ, ಬೇಜವಾಬ್ದಾರಿ ಹೇಳಿಕೆ ನೀಡುವುದು ಖಂಡನೀಯ. ರೈತ ಆತ್ಮಹತ್ಯೆ ಎಂದು ಪರಿಗಣಿಸಲು, ಸಂಬಂಧಪಟ್ಟ ರೈತ ಬ್ಯಾಂಕ್ ಸಾಲ ಹೊಂದಿರಬೇಕು ಹಾಗೂ ಬ್ಯಾಂಕಿನಿಂದ ನೋಟೀಸ್ ಜಾರಿಗೊಂಡಿರಬೇಕು ಎನ್ನುವ ನಿಯಮ ನಿಮ್ಮದೇ ಅಥವಾ ಸರ್ಕಾರದ ನಿಯಮವೇ? ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿಗಳೇ ಒಮ್ಮೆ, ಗ್ರಾಮಾಂತರ ಪ್ರದೇಶದಲ್ಲಿ ರೈತರ ಶ್ರಮ ಮತ್ತು ಅವರ ಕೃಷಿ ನಿರ್ವಹಣೆಯ ಕಷ್ಟಗಳನ್ನು ವೀಕ್ಷಿಸಿ, ನೈಸರ್ಗಿಕ ವಿಪತ್ತಿಗಳಲ್ಲಿ ಅವರು ಯಾವ ಸಮಸ್ಯೆ ಎದುರಿಸುತ್ತಾರೆಂದು ಗಮನಿಸಿ ಎಂದು ಅವರು ಜಿಲ್ಲಾಧಿಕಾರಿಗಳಿಗೆ ನೇರವಾಗಿ ಹೇಳಿದ್ದಾರೆ.
ಈ ಸಲ ಉತ್ತಮ ಮಳೆಯಾಗಿದೆಂಬ ರೈತನ ಮುಖದ ಮಂದಹಾಸವಿತ್ತು. ಆದರೆ, ಇತ್ತೀಚಿಗೆ ಸುರಿದ ಮಳೆಯಿಂದಾಗಿ ಎಲ್ಲವೂ ನಾಶವಾಗಿದೆ. ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ರೈತನಿಗೆ ಪರಿಹಾರ ಕೊಡುವುದು ಸರ್ಕಾರದ ಕರ್ತವ್ಯ. ರೈತರು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೋಟ್ಯಾಂತರ ರೂ. ನೀಡುತ್ತಾರೆ. ಇದಕ್ಕೆ ಪರಿಹಾರ ನೀಡುವುದು ಸರ್ಕಾರ ಕರ್ತವ್ಯವಾಗಿದೆ. ರೈತರೇನು ಭಿಕ್ಷೆ ಬೇಡುವುದಿಲ್ಲ. ರೈತ ಸತ್ತರೇ, ಬ್ಯಾಂಕಿನಲ್ಲಿ ಸಾಲ ಇರಬೇಕು, ನೋಟೀಸ್ ನೀಡಿರಬೇಕು ಎಂದು ಹೇಳಿರುವ ಬೇಜವಾಬ್ದಾರಿ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೇ, ನಮ್ಮ ರೈತರ ತಾಕತ್ತು ಏನು ಎನ್ನುವುದು ನಿಮಗೆ ತೋರಿಸಬೇಕಾಗುತ್ತದೆಂದು ಎಚ್ಚರಿಸಿದರು.
ಜಿಲ್ಲಾಡಳಿತ ರೈತರಪರ ಎಷ್ಟು ನ್ಯಾಯಯುತವಾಗಿದೆಂದು ಪ್ರಶ್ನಿಸಿದ ಅವರು, ರೈತ ಸಂಪರ್ಕ ಕೇಂದ್ರ ಎಲ್ಲಿದೆ, ಬೀಜ ಪೂರೈಕೆ ಸಮರ್ಪಕವಾಗಿ ನಡೆಯುತ್ತಿದೆಯೇ?, ಔಷಧಿ ದೊರೆತಿದೆಯೇ?, ಬೆಂಬಲಿತ ಬೆಲೆ ನೀಡಲಾಗಿದೆಯೇ? ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಈ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?. ಆದರೂ ರೈತರು ಎಲ್ಲವನ್ನು ಸಹಿಸಿಕೊಂಡಿದ್ದಾರೆ. ಮೇಲಾಗಿ ಈ ರೀತಿ ಜಿಲ್ಲಾಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡುವುದು, ಎಷ್ಟು ಸರಿ?. ರೈತರ ಆತ್ಮಹತ್ಯೆಯನ್ನು ಬೆಳೆ ನಷ್ಟದಿಂದ ರೈತ ಆತ್ಮಹತ್ಯೆ ಮಾಡಿಕೊಂಡರೇ, ಇದನ್ನು ಪರಿಗಣಿಸಲಾಗುವುದಿಲ್ಲವೆಂದು ಹೇಳಿದರೇ, ರೈತನ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಗಿದೆ. ಜಿಲ್ಲೆಯಲ್ಲಿ ಶೂನ್ಯವಿರುವುದು ರೈತರ ಸಾವಲ್ಲ, ಈ ಸರ್ಕಾರದ ಸಾವು. ಇಂತಹ ಸರ್ಕಾರ ಇದ್ದರೇಷ್ಟು, ಸತ್ತರೇಷ್ಟು ಎಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.