ರೈತರ ಆತ್ಮಹತ್ಯೆ ಎಚ್‌ಡಿಕೆ ಕಳವಳ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೧೬:ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಬೀಗುತ್ತಿರುವ ಕಾಂಗ್ರೆಸ್, ರೈತರ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ ಇದೇನಾ ಕರ್ನಾಟಕ ಮಾದರಿ, ರಾಜ್ಯದಲ್ಲಿ ಕೃಷಿ ಇಲಾಖೆ ಇದೆಯೇ ಎಂದು ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.
ರೈತ ಆತ್ಮಹತ್ಯೆಯ ವರದಿಗಳನ್ನು ಓದಿ ಸಂಕಟವಾಗುತ್ತಿದೆ. ಇನ್ನೆಷ್ಟು ದಿನ ಈ ಸಾವುಗಳನ್ನು ನೋಡಬೇಕು, ಕೇವಲ ಪ್ರಚಾರ ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕೃಷಿ ಇಲಾಖೆ ಕಸಾಯಿ ಖಾನೆಯಾ ಎಂದು ಪ್ರಶ್ನಿಸಿರುವ ಅವರು, ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ ಕೆಲವರಿಗೆ ಅದೇ ವರ. ನಿಜ ನೈಜಸ್ಥಿತಿ ಎಂದಿದ್ದಾರೆ.ಬೆಳೆವಿಮೆಯೂ ರೈತರ ಆಪತ್ತಿಗೆ ಆಗುತ್ತಿಲ್ಲ, ಅವರಿಗೆ ಅದರ ಬಗ್ಗೆ ವಿಶ್ವಾಸ ಇಲ್ಲ, ರೈತರು ಸಾವಿನ ದವಡೆಗೆ ಬೀಲುತ್ತಿದ್ದರೆ ಅಧಿಕಾರಿಗಳು ಅರ್ಹ ಅನರ್ಹ ಸಾವು ಎಂದು ಲೆಕ್ಕ ಹಾಕಿಕೊಂಡು ಕೂತಿದ್ದಾರೆ. ಸಾವಿನಲ್ಲೂ ಅರ್ಹತೆ ಅನರ್ಹತೆ ಹುಡುಕುವ ಈ ಕ್ರೂರತೆಗೆ ಕೊನೆ ಇಲ್ಲವೇ? ರೈತರ ಸಾವುಗಳೆಂದರೆ ಇಷ್ಟು ಹಗುರವೇ ಎಂದು ಟೀಕಿಸಿದ್ದಾರೆ.
ರೈತರು ಎದೆಗುಂದಬಾರದು ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಕುಮಾರಸ್ವಾಮಿ ರೈತರಿಗೆ ಹೇಳಿ ಜೀವ ಬಿಟ್ಟ ರೈತ ಕುಟುಂಬಕ್ಕೆ ಮಾನವೀಯತೆಯ ನೆರವು ಕೊಡಬೇಕು, ವಿಳಂಬ ಸರಿಯಲ್ಲ, ಸರ್ಕಾರ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲು ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.