‘ರೈತರ ಆಗ್ರಹ ಜಾಥಾ’ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ

ಬಳ್ಳಾರಿ ಜ.08 : ರೈತ-ಕೃಷಿಕಾರ್ಮಿಕ (ಆರ್.ಕೆ.ಎಸ್) ಸಂಘಟನೆಯಿಂದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರಾರಂಭವಾಗಿರುವ ಜಾಥಾ ಮುಂದುವರೆದಿದ್ದು, ಸೋಮಸಮುದ್ರ, ಕೋಳೂರು, ಮದಿರೆ, ದಮ್ಮೂರು, ಕಗ್ಗಲ್ಲು, ಚಾನಾಳು, ಬೈಲೂರು, ಸಿಂಧಗೇರಿ, ಶಾನವಾಸಪುರ, ಸಿರಿಗೇರಿ, ಕುರುಗೋಡು ಪಟ್ಟಣ ಸೇರಿದಂತೆ ಸುಮಾರು 24 ಗ್ರಾಮಗಳಲ್ಲಿ ಸಭೆಗಳು ನಡೆದವು.
ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಅಪಾಯದ ಬಗ್ಗೆ ಹಳ್ಳಿಗಳಲ್ಲಿ ಸವಿವರವಾಗಿ ವಿವರಿಸಲಾಯಿತು. ಕೆಲವು ರೈತರು ಇದಕ್ಕೆ ಸ್ಪಂದಿಸುತ್ತಾ “ ನಮಗೆ ಈ ಕಾಯ್ದೆಗಳ ಬಗ್ಗೆ ತಿಳಿದೇ ಇರಲಿಲ್ಲ, ನೀವು ನಮ್ಮೂರಿಗೆ ಬಂದು ಇಷ್ಟೊಂದು ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು” ಎಂದರು. ಮತ್ತೆ ಕೆಲವರು “ಎಲ್ಲಾ ಸರ್ಕಾರಗಳು ಅಷ್ಟೆ, ರೈತರ ಬದುಕನ್ನ ಬೀದಿಗೆ ತಂದಿವೆ” ಎಂದರು. ಇನ್ನು ಕೆಲವರು “ಮೋದಿ ಸರ್ಕಾರ ಬಂದ ಮೇಲೆ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ” ಎಂದರು. ಕೆಲವು ರೈತರಂತೂ ನಮ್ಮೆಲ್ಲಾ ಕಾರ್ಯಕರ್ತರಿಗೆ ಚಹಾ-ಫಲಹಾರಗಳನ್ನು ನೀಡಿ “ ರೈತರಿಗಾಗಿ ನೀವಿಷ್ಟು ಕಷ್ಟಪಡಿತ್ತಿದ್ದೀರಿ, ನಾವಿಷ್ಟು ಮಾಡದಿದ್ದರೆ ಹೇಗೆ” ಎಂದರು.
ಹೋರಾಟ ನಿಧಿಗಾಗಿ ಅನೇಕ ರೈತರು ನೂರಾರು ರೂಪಾಯಿ ಹಣ ಸಹಾಯ ಮಾಡುತ್ತಾ “ಇದು ನಮ್ಮ ಹೋರಾಟ, ನಾವೇ ಹಣ ಸಹಾಯ ಮಾಡದಿದ್ದರೆ ಸರಿನೇ” ಎಂದರು. ಕೃಷಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಆರ್.ಕೆ.ಎಸ್‍ನಿಂದ ತಂದಿರುವ ನೂರಾರು ‘ಕೃಷಿ ಕಿಡಿ’ ಪುಸ್ತಕಗಳನ್ನು ರೈತರು ಈ ಸಂದರ್ಭದಲ್ಲಿ ಕೊಂಡುಕೊಂಡರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷಸೋಮಶೇಖರ ಗೌಡ ಮಾತನಾಡಿ. “ದೇಶದಾದ್ಯಂತ ಕರೊನಾ ರೋಗದ ಭೀತಿ ಜನರನ್ನು ಕಾಡುತ್ತಿದೆ. ಈ ಪರಿಸ್ಥಿತಿಯನ್ನು ದುರಪಯೋಗಿಸಿಕೊಂಡು ಬಂಡವಾಳಶಾಹಿ ಪರ ಮೋದಿ ಸರ್ಕಾರವು ಒಂದರ ಮೇಲೊಂದರಂತೆ ಕಾರ್ಪೋರೇಟ್ ಸಂಸ್ಥೆಗಳ ಪರ ಮತ್ತು ಜನ ವಿರೋಧಿ ನೀತಿಗಳನ್ನು, ಸಂಸತ್ತಿನಲ್ಲಾಗಲೀ ಅಥವಾ ಸಾರ್ವಜನಿಕವಾಗಲೀ ಯಾವ ಚರ್ಚೆಯನ್ನೂ ಮಾಡದೆ ಜಾರಿ ಮಾಡುತ್ತಿದೆ. ಈ ದಮನಕಾರಿ ನೀತಿಗಳನ್ನು ತಾಳಲಾರದೆಯೇ ಬೀದಿಗೆ ಇಳಿದರೆ ಕರೊನಾ ರೋಗದ ನೆಪವೊಡ್ಡಿ ಜನರ ಪ್ರತಿಭಟನೆಯನ್ನು ಬರ್ಬರವಾಗಿ ಹತ್ತಿಕ್ಕಲಾಗುತ್ತಿದೆ. ಕೇಂದ್ರ ಸರ್ಕಾರವು ಬಿಜೆಪಿ ಪಕ್ಷದ ಪರ ಸಮೂಹ ಮಾಧ್ಯಮಗಳ ಮೂಲಕ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು, ಖಲಿಸ್ತಾನಿಗಳೆಂದು, ನಕ್ಸಲ್‍ವಾದಿಗಳೆಂದು, ರಾಜಕೀಯ ದಳ್ಳಾಳಿಗಳೆಂದು, ಪಾಕಿಸ್ತಾನದ ಏಜೆಂಟ್‍ರೆಂದು ಪ್ರತಿಬಿಂಬಿಸುತ್ತಿದೆ. ಮೋದಿ ಸರ್ಕಾರದ ಈ ನಾಚಿಕೆಗೇಡಿನ ವರ್ತನೆಯ ನಡುವೆಯೂ ರೈತರು ಅತ್ಯಂತ ಸಂಯಮದಿಂದ ಚಳುವಳಿಯನ್ನು ಮುಂದುವರೆಸಿದ್ದಾರೆಂದರು.
ಆರ್.ಕೆ.ಎಸ್ ಮುಖಂಡರಾದ ಹನುಮಪ್ಪ, ಗೋವಿಂದ್, ಬಸಣ್ಣ, ಪಂಪಾಪತಿ, ರೈತರಾದ ಆನಂದ್, ಶೇಖಣ್ಣ, ಮುಂತಾದವರು ಪಾಲ್ಗೊಂಡಿದ್ದರು.