ರೈತರೊಂದಿಗೆ ಒಂದು ದಿನ-ಕೃಷಿ ಸಚಿವ ಬಿ.ಸಿ.ಪಾಟೀಲ್

ಕೋಲಾರ,ಜ.೭:ರಾಜ್ಯದಲ್ಲಿ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೃಷಿ ಇಲಾಖೆ ಹಮ್ಮಿಕೊಂಡಿರುವ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಕೋಲಾರದಲ್ಲಿ ಭರ್ಜರಿಯಾಗಿ ನಡೆಯಿತು.. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ತೋಟವೊಂದರನ್ನ ಹಸಿರು ತೊರಣಗಳಿಂದ ಸಿಂಗಾರ ಮಾಡಲಾಗಿತ್ತು. ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಬೇವಹಳ್ಳಿ ಗ್ರಾಮದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಇನ್ನ ಕಾರ್ಯಕ್ರಮವನ್ನ ರಾಗಿ ಕಣಕ್ಕೆ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಅಲ್ಲದೆ ಬೇವಹಳ್ಳಿ ಗ್ರಾಮದ ಅಶ್ವಥಮ್ಮ ಎಂಬುವರ ತೋಟದಲ್ಲಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದ್ದು, ರಾಗಿ ಕಣಕ್ಕೆ ಪೂಜೆ ಮಾಡಿದ ನಂತರ ಸಮಗ್ರ ಕೃಷಿ ಪದ್ದತಿಯನ್ನ ವೀಕ್ಷಣೆ ಮಾಡಿದರು. ನಂತರ ರೇಷ್ಮೆ ಸಾಕಾಣಿಕೆಯನ್ನ ವಿಕ್ಷಣೆ ಮಾಡಿದ ಸಚಿವರು ಹಸುವಿನಲ್ಲಿ ಹಾಲು ಕರೆಯುವುದರ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸಿದರು. ಇನ್ನು ಇದೇ ವೇಳೆ ಕೃಷಿ ಚಟುವಟಿಕಗಳಿಗೆ ಸಂಭಂಧಿಸಿದಂತೆ ಹಲವಾರು ಸ್ಪರ್ದೆಗಳನ್ನ ಆಯೋಜನೆ ಮಾಡಲಾಗಿತ್ತು. ಅದರಂತೆ ಆಲೂಗಟ್ಟೆ ನಾಟಿ ಮಾಡುವುದು, ಟೊಮ್ಯಾಟೊ ನಾಟಿ ಮಾಡುವುದು ಸೇರಿದಂತೆ ಹಲವಾರು ಸ್ಪರ್ಧೆಗಳನ್ನ ನಡೆಸಿ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನವನ್ನ ನೀಡಿದರು. ನಂತರ ಕೊತ್ತಂಬರಿ ಚೆಲ್ಲಿ ತೋಟದಲ್ಲಿ ಉಳುಮೆ ಮಾಡಿದರು. ಈ ವೇಳೆ ಸಂಸದ ಎಸ್.ಮುನಿಸ್ವಾಮಿ, ಸಚಿವ ಎಚ್.ನಾಗೇಶ್ ಸಹ ಉಳುಮೆ ಮಾಡುವುದರ ಮೂಲಕ ಸಚಿವರಿಗೆ ಸಾಥ್ ನೀಡಿದರು. ನಂತರ ದೇವಸ್ಥಾನಕ್ಕೆ ಭೇಟಿ, ಎತ್ತಿನ ಗಾಡಿ ಸವಾರಿ ಮೂಲಕ ಮುಳಬಾಗಿಲಿನ ವಡ್ಡಹಳ್ಳಿ ಟೊಮ್ಯಾಟೊ ಮಂಡಿಯಲ್ಲಿ ಆಯೋಜನೆ ಮಾಡಲಾಗಿದ್ದ ರೈತರೊಂದಿಗೊಂದು ದಿನ ವೇದಿಕೆ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿ ಮಾತನಾಡಿದರು.
ಕೃಷಿ ಸಂಸ್ಕೃತಿ ಬೆಳೆಯಲಿ
ನಗರ ಭಾಗದ ಜನತೆಯಲ್ಲಿ ಕೃಷಿಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ. ವೀಕೆಂಡ್ ಪಬ್ ಬಾರ್ ಬಿಟ್ಟು, ವೀಕೆಂಡ್ ಅಗ್ರಿಕಲ್ಚರ್ ಹುಟ್ಟುವಂತಾಗಬೇಕು. ರೈತರೊಂದಿಗೆ ನಾವಿದ್ದೇವೆ ಸರ್ಕಾರವಿದೆ ಎಂಬ ಸಂದೇಶ ಆತ್ಮವಿಶ್ವಾಸ ಮೂಡಿಸುವುದೇ ನನ್ನ ಗುರಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು.
ರೈತರ ಮಕ್ಕಳಿಗೆ ಕೃಷಿ ಕಾಲೇಜುಗಳಲ್ಲಿ ಈಗಿರುವ ಶೇ.೪೦ ಮೀಸಲಾತಿಯನ್ನು ಶೇ.೫೦ಕ್ಕೆ ಏರಿಸುವ ಚಿಂತನೆ ತಮ್ಮದಾಗಿದೆ. ಅಲ್ಲದೇ ಆಕಸ್ಮಿಕವಾಗಿ ಮೃತಪಟ್ಟ ರೈತರ ಪರಿಹಾರವನ್ನೂ ಸಹ ಹೆಚ್ಚಿಸುವ ಉದ್ದೇಶವಿದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಕೃಷಿ ಹಾಳಾದರೆ ದೇಶ ಉಳಿಯುವುದಿಲ್ಲ. ಕೃಷಿಯನ್ನು ನಂಬದಿದ್ದರೆ ಬದುಕೇ ಇಲ್ಲ. ಸರ್ಕಾರವನ್ನು ರೈತರು ಹುಡುಕಿಕೊಂಡು ಹೋಗುವುದಲ್ಲ. ಸರ್ಕಾರವೇ ರೈತನ ಹತ್ತಿರ ಬರುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ರೈತನನ್ನು ಆತ್ಮವಿಶ್ವಾಸಿಯನ್ನಾಗಿಸುವುದೇ ನನ್ನ ಉದ್ದೇಶ ಎಂದು ಬಿ.ಸಿ.ಪಾಟೀಲ್ ಹೇಳಿದರು.ಕೃಷಿ ಸಚಿವನಾದ ಆರಂಭದಲ್ಲಿ ಕೃಷಿ ತಜ್ಞರ ಅಧಿಕಾರಿಗಳ ಸಭೆ ನಡೆಸಿ ರೈತರ ಆತ್ಮಹತ್ಯೆ ಬಗ್ಗೆ ಚರ್ಚಿಸಿ ಕಾರಣ ಕೇಳಿದಾಗ ಸಮಗ್ರ ಕೃಷಿ ಪದ್ಧತಿ ಇದಕ್ಕೆ ಪರಿಹಾರ ಎಂಬ ಅಭಿಪ್ರಾಯ ಕೇಳಿಬಂದಿತು.ಕೋವಿಡ್ ಲಾಕ್ಡೌನ್‌ನಲ್ಲಿ ಕೃಷಿ ಚಟುವಟಿಕೆ ನಿಲ್ಲಬಾರದು ರೈತರಿಗೆ ಟೋಲ್‌ಗಳೆಲ್ಲ ಮುಕ್ತವಾಗಿ ತೆರೆದು ಕೃಷಿ ಚಟುವಟಿಕೆ ಮಳೆ ಬೆಳೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.
ಸಂಸದ ಮುನಿಸ್ವಾಮಿ ಮಾತನಾಡಿ,ಕೃಷಿ ಸಚಿವ ಬಿ.ಸಿ.ಪಾಟೀಲ್ ಒಬ್ಬ ಯಶಸ್ವಿ ಮಾದರಿ ಸಚಿವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ, ಸೇರಿದಂತೆ ಅಧಿಕಾರಿಗಳು ಹಾಗೂ ಕಾರ್ಯಕ್ರಮಕ್ಕೆ ನೂರಾರು ರೈತರು ಆಗಮಿಸಿದ್ದರು.