ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

ಚಿತ್ರದುರ್ಗ,ಸೆ.೧೨: ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ರೈತ ಸಮುದಾಯ ಹೊರಬಂದು, ಆಧುನಿಕ ತಂತ್ರಜ್ಞಾನ ಬಳಸಿ ಸಮಗ್ರ ಕೃಷಿ ಕೈಗೊಂಡು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ರೈತ ಲಕ್ಷ್ಮಣ ರೆಡ್ಡಿ ಅವರ ತಾಕುವಿನಲ್ಲಿ  ರೈತರೊಂದಿಗೊಂದು ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸಾಲದಿಂದ ಮುಕ್ತರಾಗಬೇಕು ಎಂಬುದು ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಉದ್ದೇಶವಾಗಿದೆ. ರೈತರ ಮೋಡ, ಆಕಾಶ ನೋಡಿ ಬೆಳೆ ಬೆಳೆಯುತ್ತಾರೆ. ರೈತರ ಜೀವನ ಮಾನ್ಸೂನ್ ಜೊತೆ ಜೂಜಾಟ ಆಡುವುದಾಗಿದೆ. ರೈತ ನಿತ್ಯವೂ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಆದಾಗ್ಯೂ ಕಳೆದ ವರ್ಷ 154 ಲಕ್ಷ ಮೆಟ್ರಿಕ್ ಟನ್ ಆಹಾರವನ್ನು ರಾಜ್ಯದಲ್ಲಿ ಬೆಳೆಯಲಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಶೇ.10ರಷ್ಟು ಹೆಚ್ಚು ಪಟ್ಟು ಆಹಾರ ಬೆಳೆಯಲಾಗಿದೆ. ಕೃಷಿ ಮುಂದೆ ಹೋಗಿದೆ, ಆದರೆ ಕೃಷಿಕ ಮುಂದೆ ಹೋಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಕೃಷಿಕರು ಸಮಗ್ರ ಕೃಷಿ ಪದ್ಧತಿ, ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ನವೆಂಬರ್ 14 ರಿಂದ ಮಂಡ್ಯ ಜಿಲ್ಲೆಯಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಪ್ರಾರಂಭ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆಯೂ ದೊರೆಯುತ್ತಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ನಾವು ಭೂಮಿಯನ್ನು ಬರಡು ಮಾಡುತ್ತಿದ್ದೇವೆ. ರೈತರು ತಮ್ಮ ಜಮೀನಿಗೆ ಬಿತ್ತನೆ ಬೀಜ ಹಾಕುವುದಕ್ಕೂ ಮೊದಲು ಮಣ್ಣು ಪರೀಕ್ಷೆ ಮಾಡಬೇಕು. ನಂತರ ಕೃಷಿ ಇಲಾಖೆಯ ಸಲಹೆಯಂತೆ ಬೆಳೆ ಬೆಳೆದರೆ ಉತ್ತಮ ಫಸಲು ಬರಲಿದೆ. ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಕೆ ಮಾಡಿದರೆ ಭೂಮಿಯ ಫಲವತ್ತತೆ ನಶಿಸಿಹೋಗುತ್ತದೆ. ಹಾಗಾಗಿ ರಾಸಾಯನಿಕ ಗೊಬ್ಬರಗಳಿಗೆ ದಾಸರಾಗಬಾರದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ ಬಳಸಬೇಕು ಎಂದು ಸಲಹೆ ನೀಡಿದರು.
ರೈತರು ಕೃಷಿಯ ಜೊತೆಗೆ ಕೃಷಿಯ ಉಪಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಸೇರಿದಂತೆ ಈ ರೀತಿಯ ಉಪ ಕಸುಬುಗಳಿಂದ ರೈತರು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು. ರೈತರು  ತಾವು ಬೆಳೆದ ಬೆಳೆಗಳನ್ನು ಸಂಸ್ಕರಣೆ ಮಾಡಿ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ತಾವೇ ಮೌಲ್ಯವರ್ಧನೆ ಮಾಡಬೇಕು. ಸರ್ಕಾರದ ನೆರವು ಪಡೆಯುವ ಮೂಲಕ ಆಹಾರ ಸಂಸ್ಕರಣಾ ಘಟಕಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಕೃಷಿ ಉಪನಿರ್ದೇಶಕರಾದ ಪ್ರಭಾಕರ್, ಹುಲಿರಾಜ್, ಕೃಷಿ ಇಲಾಖೆ ಕೇಂದ್ರ ಸ್ಥಾನಿಕ ಸಹಾಯಕ ಕೃಷಿ ನಿರ್ದೇಶಕ ನಟರಾಜ್, ಸಹಾಯಕ ಕೃಷಿ ನಿರ್ದೇಶಕರಾದ ಉಲ್ಪತ್ ಜಯಿಬಾ, ಚಂದ್ರಕುಮಾರ್, ಈಶಾ ಹಾಗೂ ವಿವಿಧ ಕೃಷಿ ಇಲಾಖೆ ಅಧಿಕಾರಿಗಳು, ಜಮೀನಿನ ಮಾಲಿಕರಾದ ಲಕ್ಷ್ಮಣ್‍ರೆಡ್ಡಿ ಹಾಗೂ ವಿವಿಧ ರೈತ ಮುಖಂಡರುಗಳು ಭಾಗವಹಿಸಿ ಸಚಿವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು.