
ನವದೆಹಲಿ.ಜ. 8- ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಹಠ ಹಿಡಿದಿರುವ ಹಿನ್ನೆಲೆಯಲ್ಲಿ ಇಂದು ನಡೆದ ರೈತರ ನಡುವಿನ 8 ನೇ ಸುತ್ತಿನ ಮಾತುಕತೆ ಮತ್ತೆ ವಿಫಲವಾಗಿದೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಬಿಗಿ ಪಟ್ಟು ಹಿಡಿರುವ ಹಿನ್ನೆಲೆಯಲ್ಲಿ ಜನವರಿ ಯೋಜನೆಗಳನ್ನು ಮತ್ತೊಮ್ಮೆ ಮಾತುಕತೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ರೈತ ನಾಯಕರು ಮತ್ತು ಕೇಂದ್ರದ ಸಚಿವರ ನಡುವೆ ನಡೆದ ಮಾತುಕತೆಯ ಬಳಿಕ ಮಾಹಿತಿ ನೀಡಿದ ಸಚಿವರು, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬದಲು ಬೇರೆ ಮಾರ್ಗಗಳನ್ನು ತಿಳಿಸಿ, ಅದನ್ನು ಪರಿಗಣಿಸುವುದಾಗಿ ರೈತರಿಗೆ ತಿಳಿಸಿರುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ತಿದ್ದುಪಡಿಗಳ ಕುರಿತು ರೈತರಿಗೆ ಕಾನೂನಿನ ಅಂಶಗಳನ್ನು ಮನವರಿಕೆ ಮಾಡಿಕೊಡಲಾಗಿದೆ. ಈ ಸಂಬಂಧ ಜನವರಿ 15ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ
ಕನಿಷ್ಠ ಬೆಂಬಲ ಬೆಲೆ ಯೋಜನೆ ಮುಂದುವರೆಯುವ ಜೊತೆಗೆ ದೇಶದಲ್ಲಿ ಯಾವುದೇ ಕಾರಣಕ್ಕೂ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಂದ್ ಮಾಡುವುದಿಲ್ಲ ಎಂದು ಕಳೆದ ಬಾರಿಯ ಸಭೆಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅನ್ನಾನ್ ಮೊಲ್ಲಾ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರೈತರೊಂದಿಗೆ ಎಂಟು ಸುತ್ತಿನ ಮಾತುಕತೆ ನಡೆದಿದೆ. ಕೃಷಿ ಕಾಯ್ದೆಯನ್ನು ಹಿಂಪಡೆಯದ ಹೊರತು ನಮ್ಮ ಮುಂದೆ ಬೇರೆ ಆಯ್ಕೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ 44 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರು ಮತ್ತು ಕೇಂದ್ರ ಸರ್ಕಾರದೊಂದಿಗೆ ನಡೆಯುತ್ತಿರುವ ಹಗ್ಗ-ಜಗ್ಗಾಟ ಮುಂದುವರಿದಿದೆ.
ಜನವರಿ 26ರಂದು ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿ ಗಡಿಯಿಂದ ದೆಹಲಿ ಒಳಭಾಗಕ್ಕೆ ಪ್ರವೇಶಿಸಲು ಉದ್ದೇಶಿಸಿದ್ದು, ಗಣರಾಜ್ಯೋತ್ಸವ ದಿನವಾದ ಅಂದು ಟ್ರಾಕ್ಟರ್ ರಾಲಿ ನಡೆಸಲು ನಿರ್ಧರಿಸಿದ್ದಾರೆ.