ರೈತರೇ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸುವಾಗ ಮುಂಜಾಗ್ರತೆ ಇರಲಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.22: ತಾಲೂಕಿನ ರೈತ ಬಾಂಧವರೇ ಬೀಜ ರಸಗೊಬ್ಬರ ಮತ್ತು ಕೀಟನಾಶಕಗಳ ಖರೀದಿಸುವಾಗ ಜಾಗೃತರಾಗಿರಬೇಕು ಹಾಗೂ ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟ ಕೇಂದ್ರಗಳಿಂದಲೇ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಬೇಕು ಎಂದು ತಾಲೂಕು ಕೃಷಿ ಇಲಾಖೆ ನಿರ್ದೇಶಕ ಎನ್.ನಜೀರ್ ಅಹಮ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಕೃಷಿ ಇಲಾಖೆಯ ಕಛೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ 17ಲಾರಿಗಳ ನಕಲಿ ಡಿ.ಎ.ಪಿ ರಸಗೋಬ್ಬರವನ್ನು ಕೃಷಿ ಇಲಾಖೆಯು ವಶಪಡಿಸಿಕೊಂಡಿದ್ದು, ನಮ್ಮ ತಾಲೂಕಿನ ಸುತ್ತಮುತ್ತ ಅಕ್ರಮವಾಗಿ ಮಾರಾಟ ಮಾಡುವವರು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸುವಾಗ ಮಾರಾಟಗಾರರಿಂದ ಕಡ್ಡಾಯವಾಗಿ ರಸೀದಿಯನ್ನು ಕೇಳಿ ಪಡೆಯಬೇಕು, ಬಿತ್ತನೆ ಬೀಜ ಖರೀದಿ ರಸೀದಿಯಲ್ಲಿ ತಳಿಹೆಸರು, ಮಾರಾಟಗಾರರ ಹೆಸರು, ಅಂಗಡಿ ಗಮನಿಸಬೇಕು.
ರಸಗೊಬ್ಬರದ ಚೀಲವನ್ನು ಖರೀದಿಸುವಾಗ ಚೀಲವನ್ನು ಪರೀಶಿಲಿಸಬೇಕು, ನಮೂದಿಸಿದಂತೆ ತೂಕ ಸರಿಯಾಗಿದೆಯೇ? ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು, ಸಂಶಯವಾದಲ್ಲಿ ತೂಕ ಮಾಡಿಸಿ ಖರೀದಿಸಬೇಕು.
ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿಗೆ ಹಣವನ್ನು ನೀಡಬಾರದು. ರಸಗೊಬ್ಬರ ಖರೀದಿ ರಸೀದಿಯಲ್ಲಿ ರಸಗೊಬ್ಬರದ ಹೆಸರು, ಬ್ರಾಂಡ್ ಹೆಸರು ಮತ್ತು ಬ್ಯಾಚ್ ಸಂಖ್ಯೆ ನಮೂದಿಸಿರಬೇಕು. ರಸಗೊಬ್ಬರವನ್ನು ಖರೀದಿಸಬೇಕಾದರೆ ರೈತರು ತಪ್ಪದೇ ಆರ್ಧಾ ಸಂಖ್ಯೆಯನ್ನು ನೀಡಿ ಪಿ.ಓ.ಎಸ್ ಮಷಿನ್ ಬಿಲ್ಲನ್ನು ತಪ್ಪದೇ ಪಡೆಯಬೇಕು. ಕೀಟನಾಶಕಗಳನ್ನು ಖರೀದಿಸುವಾಗ ಬಾಟಲಿ, ಟಿನ್, ಪಾಲಿಥೀನ್, ಪೌಚ್ ಮೇಲೆ ತಯಾರಕರ ಹೆಸರು, ತಯಾರಿಸಿದ ದಿನಾಂಕ, ಎಕ್ಸಪೈರಿ ದಿನಾಂಕ ಬ್ಯಾಚ್ ಸಂಖ್ಯೆ ಹಾಗು ಎರಡು ತ್ರಿಕೋನಗಳ ಚಿನ್ನೆಯನ್ನು ತಪ್ಪದೇ ಗಮನಿಸಬೇಕು. ರೈತರು ಅಧಿಕೃತವಾದ ಕೀಟನಾಶಕಗಳನ್ನು ಮಾತ್ರ ಖರೀದಿಸಬೇಕು ಮತ್ತು ವಿವಿಧ ಬೆಳೆಗಳಿಗೆ ಕೀಟಗಳ ಹತೋಟಿಗಾಗಿ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ನಿಗಧಿತ ಪಮಾಣದಲ್ಲಿ ಮಾತ್ರ ಬಳಸಬೇಕು.
ರೈತ ಬಾಂಧವರಿಗೆ ನಕಲಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ತಯಾರಿಕೆ ಹಾಗೂ ಮಾರಾಟ ಮಾಡುವುದರ ಬಗ್ಗೆ ಕಂಡು ಬಂದಲ್ಲಿ ಆಯಾ ರೈತ ಸಂಪರ್ಕ ಕೇಂದ್ರದ ತಾಲೂಕಿನ ಪರೀವೀಕ್ಷಕರಿಗೆ ದೂರವಾಣಿ ಮುಖಾಂತರ ಅಥವಾ ಲಿಖಿತ ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ದೂರುದಾರನ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.

Attachments area