ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು:ಬೆಳ್ಳಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.17: ರೈತರು ತಮ್ಮ ಬೆಳೆಗೆ ಹೆಚ್ಚಿನ ಲಾಭ ಪಡೆಯಲು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕೆಂದು ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ತಿಳಿಸಿದರು.
ಇಂಡಿ ತಾಲೂಕಿನ ಇಂಗಳಗಿ, ಸಾಲೋಟಗಿ, ನಾದ ಕೆ. ಡಿ, ಶಿರಶ್ಯಾಡ ಮತ್ತು ಸಂಗೋಗಿ ಗ್ರಾಮದ ವಿವಿಧ ರೈತರ ಕ್ಷೇತ್ರಗಳಿಗೆ ಶನಿವಾರ ಭೇಟಿ ನೀಡಿ ಮಾಹಿತಿ ನೀಡಿದರು.
ರೈತರು ಇಂದಿನ ಅಭಾವ ಪರಿಸ್ಥಿತಿಯಲ್ಲಿ ತಮ್ಮ ಬೆಳೆಗೆ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಮತ್ತು ಸುಲಭ ಬೆಲೆಗೆ ದೊರಕುವ ಜೈವಿಕ ಗೊಬ್ಬರ ಬಳಸಬೇಕು, ಎರಡು ಸಾಲುಗಳ ಮಧ್ಯದಲ್ಲಿ ಹಸಿರೆಲೆಗೊಬ್ಬರ ಗಿಡಗಳಾದ ಸೆಣಬು, ಡೈಯಂಚಾ ಬೆಳೆದು ಮುಗ್ಗು ಹೊಡೆಯಬೇಕು. ಬೆಳೆಗಳಿಗೆ ಗೋಕೃಪಾಮೃತ ಜಲ, ಜೀವಾಮೃತ, ಪಂಚಗವ್ಯ, ಬ್ರಹ್ಮಾಸ್ತ್ರದಂತಹ ಪ್ರಚೋದಕಗಳನ್ನು ಸಿಂಪರಣೆ ಮಾಡಬೇಕು. ಬಿಸಿಲು ಹೆಚ್ಚಾಗಿದ್ದರಿಂದ ಬೆಳೆಗಳಿಗೆ ಕೃಷಿ ತ್ಯಾಜ್ಯ ಹೊದಿಕೆ ಮಾಡಬೇಕು. ಸಾವಯವದಿಂದ ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿರುವದರಿಂದ ಸಾವಯವ ದೃಢೀಕರಣ ಮಾಡಿಸಬೇಕೆಂದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಶಿವಾನಂದ ಕುಂಬಾರ, ಎಸ್.ಟಿ. ಪಾಟೀಲ, ಸಿದ್ದಪ್ಪ ಭೂಸಗೊಂಡ, ಶಿವಾನಂದ ಹುಗ್ಗಿ, ಚಂದ್ರಶೇಖರ ಪಾಸೋಡಿ, ಅನೀಲಕುಮಾರ, ಎಸ್. ಪಿ. ಬಿಸನಾಳ ಸೇರಿದಂತೆ ಅನೇಕ ಪ್ರಗತಿಪರ ರೈತರು ಉಪಸ್ಥಿತರಿದ್ದರು.