ರೈತರು ಸಮಗ್ರ, ವೈಜ್ಞಾನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಿ

ಕಲಬುರಗಿ,ಜು.22: ರೈತರು ಹಳೆಯ ಮಾದರಿಯ ಬೇಸಾಯ ಪದ್ಧತಿಯನ್ನೇ ಇಂದಿಗೂ ಕೂಡಾ ಮುಂದುವರಿಸುತ್ತಿದ್ದರಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೊಸ ತಂತ್ರಜ್ಞಾನದ ಮತ್ತು ಸುಧಾರಿತ ಬೀಜಗಳ ಬಳಕೆ, ಬೀಜೋಪಚಾರ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಎರಹುಳ ಗೊಬ್ಬರದ ಉಪಯೋಗ, ಕೃಷಿ ಜೊತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು, ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆಯಂತಹ ಸಮಗ್ರ ಮತ್ತು ವೈಜ್ಞಾನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಜಗಜೀವನರಾಮ್ ಅಭಿನವ ಕಿಸಾನ್ ಪ್ರಶಸ್ತಿ ಪುರಸ್ಕøತ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಹಾಳ್ ಸುಲ್ತಾನಪುರ ಗ್ರಾಮದ ತಮ್ಮ ತೋಟದಲ್ಲಿ ಕಲಬುರಗಿಯ ;ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ಬಳಗದ 3000ನೇ ಕಾರ್ಯಕ್ರಮವು ಆದ ‘ರಾಷ್ಟ್ರೀಯ ಮಾವಿನಹಣ್ಣು ದಿನಾಚರಣೆ, ಪ್ರಗತಿಪರ ರೈತರಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಮಾತನಾಡಿ, ‘ಹಣ್ಣುಗಳ ರಾಜ’ ಎಂದು ಕರೆಸಿಕೊಳ್ಳುವ ಮಾವಿಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಅದರಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ರೋರನಿರೋಧಕ ಶಕ್ತಿ ನೀಡುವ ಸತ್ವಗಳಿವೆ. ವಿಶೇಷವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ರೈತರಿಗೆ ಮಾವಿನ ಹಣ್ಣುಗಳಿಂದ ಲಾಭ ಬರುತ್ತದೆ. ವಿವಿಧ ತಳಿಯ ಮಾವಿನಹಣ್ಣುಗಳಿದ್ದು, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಅವುಗಳನ್ನು ಬೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಭೀಮಾಶಂಕರ ಪಾಟೀಲ್, ಸತೀಶ್ಕುಮಾರ ಪಾಟೀಲ, ಗೌರಿಶಂಕರ ಪಾಟೀಲ, ಸಿದ್ದಪ್ಪ ಬಿರಾದಾರ, ಗುರುಲಿಂಗಪ್ಪ ಅಷ್ಟಗಿ, ಸೂರ್ಯಕಾಂತ ಕುಂಬಾರ, ಶ್ರೀಕಾಂತ ಪಾಟೀಲ ಸೇರಿದಂತೆ ಮತ್ತಿತರರಿದ್ದರು.