ರೈತರು, ಶ್ರಮಿಕರ ಪ್ಯಾಕೇಜ್‌ಗೆ ಸಿದ್ದು ಆಗ್ರಹ

ಬೆಂಗಳೂರು,ಏ.೩೦- ರಾಜ್ಯದಲ್ಲಿ ಲಾಕ್‌ಡೌನ್ ಹೇರಿಕೆ ಮಾಡಿರುವುದರಿಂದ ದುಡಿಯುವ ವರ್ಗಕ್ಕೆ, ರೈತರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್ ಹೇರಿಕಯಾಗಿರುವುದರಿಂದ ದುಡಿಯುವ ವರ್ಗ ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನ್ಯಾಯಯುತವಾದ ಆರ್ಥಿಕ ಪ್ಯಾಕೇಜ್‌ನ್ನು ನೀಡುವಂತೆ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜನ ಬೇಸಿಗೆಯಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಈಗ ಲಾಕ್‌ಡೌನ್ ಜಾರಿಯಾಗಿರುವುದರಿಂದ ದುಡಿಮೆ ಸಂಪೂರ್ಣ ಹಾಳಾಗಿದೆ. ಹಾಗೆಯೇ ರೈತಾಪಿ ವರ್ಗವೂ ಸಂಕಷ್ಟದಲ್ಲಿದೆ.
ಬಿಪಿಎಲ್ ವರ್ಗದಡಿ ಬರುವ ಕುಟುಂಬಗಳು ಸಂಕಷ್ಟದಲ್ಲಿದ್ದು, ಇವರೆಲ್ಲರಿಗೂ ಪ್ರತಿ ತಿಂಗಳು ಕನಿಷ್ಟ ೧೦ ಸಾವಿರ ರೂ.ಗಳ ಆರ್ಥಿಕ ಪ್ಯಾಕೇಜ್‌ನ್ನು ನೀಡುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರೈತರಿಗೆ ಆರ್ಥಿಕ ಪ್ಯಾಕೇಜ್ ಜತೆಗೆ ಬೀಜ, ಗಪಬ್ಬರ ಔಷಧಿಗಳನ್ನು ಉಚಿತವಾಗಿ ನೀಡಬೇಕು. ಹಾಗೆಯೇ ಬ್ಯಾಂಕುಗಳಿಂದ ಕನಿಷ್ಠ ೫ ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಕೃಷಿ ಸಾಲ ನೀಡುವಂತೆಯೂ ಅವರು ಆಗ್ರಹಿಸಿದ್ದಾರೆ.
ದೇಶದ ಕಾರ್ಪರೆಟ್ ಕುಳಗಳಿಗೆ ಸಂಬಂಧಿಸಿದ ೧೦.೫ ಲಕ್ಷ ಕೋಟಿ ಸಾಲವನ್ನು ವಸೂಲು ಮಾಡದೆ ಕೈ ಬಿಡಲಾಗಿದೆ ರೈತಾಪಿ ವರ್ಗಕ್ಕೆ ನೀಡುವ ಬಡ್ಡಿರಹಿತ ಸಾಲದಿಂದ ದೇಶದ ಆರ್ಥಿಕತೆ ಮುಳುಗುವುದಿಲ್ಲ. ಬದಲಿಗೆ ಸುಧಾರಣೆಯಾಗುತ್ತದೆ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.
ನಗರ ಪ್ರದೇಶಗಳಿಂದ ಗ್ರಾಮಗಳಿಂದ ವಲಸೆ ಹೋಗಿರುವವರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈಗಲೂ ಅವರು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರು ಪ್ರಧಾನಿಗಳ ಮೇಲೆ ಒತ್ತಡ ಹೇರಿ ರಾಜ್ಯದ ನರ ನೆರವಿಗೆ ನಿಲ್ಲುವಂತೆಯೂ ಒತ್ತಾಯಿಸಿದ್ದಾರೆ.
ನರೇಗಾ ಯೋಜನೆಯನ್ನು ಪಟ್ಟಣ ಪಂಚಾಯ್ತಿ ಪುರಸಭೆ ಹಾಗೂ ನಗರ ಸಭೆ ಪ್ರದೇಶಕ್ಕೂ ವಿಸ್ತರಿಸುವಂತೆ ಒತ್ತಾಯಿಸಿರುವ ಅವರು ನರೇಗಾ ಯೋಜನೆಯ ಕೂಲಿ ದರವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಯಾರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಪಕ್ಕದ ಕೇರಳ ಮಾದರಿಯಲ್ಲಿ ೧೦ ಕೆಜಿ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಬೇಳೆಕಾಳು ಮತ್ತು ದಿನಸಿ ಪದಾರ್ಥಗಳನ್ನು ಒಳಗೊಂಡ ಆಹಾರ ಕಿಟ್‌ಗಳನ್ನು ವಿತರಿಸುವಂತೆ ಅವರು ಒತ್ತಾಯಿಸಿದ್ದಾರೆ.
ದುಡಿಯುವ ವರ್ಗದಲ್ಲಿ ಬರುವ ಆಟೋ, ಟ್ಯಾಕ್ಸಿ, ಚಾಲಕರಿಗೂ ಪ್ಯಾಕೇಜ್ ನೀಡುವ ಜತೆಗೆ ಈ ವಾಹನಗಳ ಮಾಲೀಕರಿಗೆ ವಿಮೆಯನ್ನು ಮುಂದೂಡಬೇಕು. ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದೂ ಅವರು ಹೇಳಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೇ. ೫೦ ರಷ್ಟು ಶುಲ್ಕ ಮನ್ನಾ ಮಾಡಲು ಕಠಿಣ ನಿಯಮಾವಳಿ ರೂಪಿಸುವಂತೆಯೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.