ರೈತರು ವ್ಯಾಪಾರಿಯಂತೆ ಬೆಳೆ ಮಾರಾಟ ಮಾಡಿ


ಬಾದಾಮಿ,ಮಾ.29:ರೈತ ವಿಜ್ಞಾನಿಯಂತೆ ಯೋಚಿಸಿ ಬೆಳೆಯಬೇಕು, ವ್ಯಾಪಾರಿಯಂತೆ ಯೋಚಿಸಿ ಬೆಳೆ ಮಾರಾಟ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ವಿಷಯ ತಜ್ಞ ಶ್ರೀಪಾದ ಕುಲಕರ್ಣಿ ಹೇಳಿದರು.
ಅವರು ತಾಲೂಕಿನ ಆಲದಕಟ್ಟಿ ಗ್ರಾಮದ ಶಿವಕುಮಾರ ಹಿರೇಮಠ ಫಾರ್ಮನಲ್ಲಿ ಕೃಷಿ ಇಲಾಖೆ, ಆತ್ಮ ಯೋಜನೆಯಡಿ ಆಯೋಜಿಸಲಾಗಿದ್ದ ತೆಂಗು, ಬಾಳೆ, ಮಾವು ಬೆಳೆಯ ಬೇಸಾಯ ಕ್ರಮಗಳು ಹಾಗೂ ಕೀಟ/ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಬಾದಾಮಿ ತಾಲೂಕಿನ ಕೆಂಪು ಮಣ್ಣು, ನೀರು ತೋಟಗಾರಿಕೆ ಬೆಳೆ ಉತ್ತಮ ವೇದಿಕೆಯಾಗಿದೆ. ಅದೇ ರೀತಿ ತೆಂಗು, ಬಾಳೆ, ಮಾವು ತಳಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. ಬಾಗಲಕೋಟ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮೌನೇಶ್ವರ ಕಮ್ಮಾರ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ಮೂಲಕ ವಿವಿದ ಬೆಳೆಗಳ ಸಂಶೋಧನೆ, ಹೊಸ ಹೊಸ ಕೃಷಿ ಮಾಹಿತಿಯನ್ನು ರೈತರಿಗೆ ವಾಟ್ಸಪ ಮೂಲಕ ನೀಡಲಾಗುತ್ತಿದೆ ಎಂದರು. ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ನಾಗೂರ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರು ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತರಬೇತಿಗೆ ಹಾಜರಾಗಿ ಸದುಪಯೋಗಪಡೆದುಕೊಳ್ಳಬೇಕೆಂದು ಹೇಳಿದರು. ವೇದಿಕೆಯ ಮೇಲೆ ಕುಳಗೇರಿ ವಲಯದ ಕೃಷಿ ಅಧಿಕಾರಿ ಬಸವರಾಜ ಬುದ್ನಿ ಹಾಜರಿದ್ದರು. ತಾಲೂಕಾ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಐ.ಎನ್.ಕೆಂಗಾರ ಪ್ರಾಸ್ಥಾವಿಕವಾಗಿ ಮಾತನಾಡಿ ಆತ್ಮ ಯೋಜನೆಯ ಉದ್ದೇಶ, ರೈತರಿಗೆ ತಾಂತ್ರಿಕ ಸಲಹೆಗಳು, ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳ ಮುಖಾಂತರ ನೀಡಲಾಗುತ್ತಿದೆ ಎಂದು ಹೇಳಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವನಗೌಡ ಗೌಡರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.