ರೈತರು ನಂಬಿಕೆ ಕಳೆದುಕೊಳ್ಳುವ ಮುಂಚೆ ಪರಿಹಾರ ಒದಗಿಸಿ: ಸಗರ

ತಾಳಿಕೋಟೆ : ಜು.26:ಕೃಷಿ ಹಾಗೂ ಕೂಲಿಯನ್ನೆ ನಂಬಿರುವ ರೈತರು ಸಾಲ, ಸೂಲಮಾಡಿ ಸತತ ಕಳೆದ ಮೂರು ವರ್ಷಗಳಿಂದ ವಿಮೆ ಕಂತು ತುಂಬಿದ್ದಾರೆ ಇತ್ತ ಬೆಳೆಯು ಬಂದಿಲ್ಲಾ ಮತ್ತೊಂದೆಡೆ ಪರಿಹಾರವೂ ಕೂಡಾ ಬಂದಿಲ್ಲಾ ಕೂಡಲೇ ಫಸಲ್ ಭೀಮಾ ಯೋಜನೆಯ ಮೇಲಿನ ರೈತರು ನಂಬಿಕೆ ಕಳೆದುಕೊಳ್ಳುವ ಮುಂಚೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಒತ್ತಾಯಿಸಿದರು.

ಸೋಮವಾರರಂದು ಪಟ್ಟಣದ ತಹಶಿಲ್ದಾರರಿಗೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮನವಿ ಅರ್ಪಿಸಿ ಮಾತನಾಡಿದ ಅವರು ವಿಮೆ ಕಂಪನಿಯವರೋ ಅಥವಾ ವೀಕ್ಷಣೆ ಮಾಡುವ ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಗೊತ್ತಿಲ್ಲಾ ತಾಲೂಕಿನ ಕೆಲವು ಕಡೆಗಳಲ್ಲಿ ಒಂದು ಪ್ರದೇಶದ ಕೆಲವು ರೈತರಿಗೆ ಫಸಲ್ ಭೀಮಾ ಯೋಜನೆಯ ಹಣ ಜಮೆಯಾದರೆ ಇನ್ನೊಂದು ಪ್ರದೇಶದ ರೈತರಿಗೆ ಹಣವೇ ಜಮೆ ಯಾಗಿಲ್ಲಾ ಕೆಲವು ಪ್ರದೇಶದ ರೈತರಿಗೆ ಹೆಚ್ಚಿಗೆ ಹಣ ಜಮೆಯಾದರೆ ಇನ್ನೊಂದು ಪ್ರದೇಶದ ರೈತರಿಗೆ ಕಡಿಮೆ ಹಣ ಜಮೆಯಾಗಿದೆ ಈ ರೀತಿಯಾಗಲೂ ವಿಮೆ ಕಂಪನಿಯವರು ಹಾಗೂ ಅವೈಜ್ಞಾನಿಕವಾಗಿ ವಿಕ್ಷಣೆ ಮಾಡಿ ವರದಿ ಸಲ್ಲಿಸಿದ ಅಧಿಕಾರಿಗಳ ಕುಮ್ಮಕ್ಕಿನಿಂದ ವಿಮೆ ಹಣ ಗೋಲಮಾಲ ಮಾಡಲು ನಡೆದಿರುವ ಕುತಂತ್ರವೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ವಿಕ್ಷಣೆ ಮಾಡುವವರು ಬೇರೆಕಡೆ ಕುಳಿತು ಸ್ಥಳ ವಿಕ್ಷಣೆ ಮಾಡದೇ ಅಂದಾಜು ವರದಿ ಸಲ್ಲಿಸಿದಾಗಲೂ ಈ ಘಟನೆ ನಡೆದಿರಲು ಸಾಧ್ಯತೆಗಳಿವೆ ಹೆಚ್ಚಿಗೆ ಕಾಣುತ್ತಿವೆ ಎಂದು ಆರೋಪಿಸಿದ ಅವರು 2020-2021 ನೇ ಸಾಲಿನಲ್ಲಿ 10,05,978 ರೈತರು 123,40,48,913 ರೂ.ಗಳ ವಿಮೆಮಾಡಿಸಿದ್ದರೆ, 2021-2022 ನೇ ಸಾಲಿನಲ್ಲಿ 12,68,010 ರೈತರು 125,38,63,016 ರೂಗಳ ವಿಮೆ ಮಾಡಿಸಿದ್ದಾರೆ. ಅದೇ ರೀತಿ ಈ ವರ್ಷವೂ ಕೂಡಾ ಮಂಗಾರಿನಲ್ಲಿ ರೈತರು ವಿಮೆ ಮಾಡಿಸುತ್ತಿದ್ದಾರೆ. ಆದ್ದರಿಂದ ಈ ವಿಷಯವನ್ನು ಗಂಭಿರವೆಂದು ಪರಿಗಣಿಸಿ ಇಲ್ಲದಿದ್ದರೆ ಸರಕಾರ ಹಾಗೂ ಫಸಲ್ ಬಿಮಾ ಯೋಜನೆಯ ಬಗ್ಗೆ ರೈತರು ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ, ಅದಕ್ಕೂ ಮುಂಚೆ ಜನರಿಗೆ ಸೂಕ್ತ ನ್ಯಾಯ ಒದಗಿಸಬೇಕು, ಅದೇ ರೀತಿ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟು ರೈತರು ಬೀಜ ಗೊಬ್ಬರ ಭೂಮಿಗೆ ಚೆಲ್ಲಿ ಮುಗಿಲಿನತ್ತ ಮುಖ ಮಾಡಿದ್ದಾರೆ ಅದಕ್ಕೆ ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿದ್ದಾರೆ, ಆದಷ್ಟು ಬೇಗ ಹಳೆಯ ವಿಮೆ ಜಮಾ ಆಗುವಂತೆ ಮತ್ತು ಈ ವರ್ಷದ ಮುಂಗಾರು ಸಂಪೂರ್ಣ ವಿಫಲ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ಪದಾಧಿಕಾರಿಗಳು ತಾಲೂಕಾ ಉಪ ದಂಡಾಧಿಕಾರಿಗಳಾದ ಎ.ಕೆ.ಶರ್ಮಾ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕಲಕೇರಿ ಪಟ್ಟಣದ ಅಧ್ಯಕ್ಷರಾದ ಶಾಂತಯ್ಯ ಗಣಾಚಾರಿ, ಹೋಬಳಿ ಅಧ್ಯಕ್ಷರಾದ ಮೆಹೆಬೂಬ ಬಾಷಾ ಮನಗೂಳಿ, ಉಪಾಧ್ಯಕ್ಷರಾದ ಪುಂಡಲಿಕ ಚವ್ಹಾಣ ಮೊದಲಾದವರು ಉಪಸ್ಥಿತರಿದ್ದರು.