ರೈತರು ದಲ್ಲಾಳಿಗಳಿಂದ ರಕ್ಷಿಸಿಕೊಳ್ಳಿ

ಆಲಮೇಲ:ಡಿ.28:ದೇಶದ ಬೆನ್ನೆಲುಬಾಗಿ ಸೇವೆ ಮಾಡುವ ರೈತ ಮತ್ತು ದೇಶ ಕಾಯುವ ಸೈನಿಕರಿಗೆ ಮೊದಲು ಗೌರವಿಸಬೇಕು.ರೈತರ ಅಭಿವೃದ್ಧಿಗಾಗಿಗೆ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದಿದೆ ಎಂದು ರಾಜ್ಯ ನಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದವರು ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆಗೆ ಯೋಗ್ಯ ಬೆಲೆ ಸಿಗಲು ಕೇಂದ್ರ ಸರ್ಕಾರ ರೈತರಿಗೆ ನೇರವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲು ಹೊಸದಾಗಿ ಕೃಷಿ ಕಾಯ್ದೆ ಜಾರಿಗೆ ತಂದಿದೆ. ಪ್ರಕೃತಿ ವೈಪರಿತ್ಯದಿಂದ ಒಂದಿಲ್ಲ ಒಂದು ತೊಂದರೆಗೆ ಸಿಲುಕಿ ಶೋಚನಿಯ ಸ್ಥಿತಿಯಲ್ಲಿದ್ದರು, ಆದರೂ ರೈತರು ಧೃತಿಗೆಡದೆ ನಿರಂತರ ಕೃಷಿ ಕಾಯಕದಲ್ಲಿ ತೊಡಗಿದ್ದು ಇವರ ಅಭಿವೃದ್ಧಿ ಆಗಬೇಕಾಗಿದೆ. ರೈತ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಅಗತ್ಯ ಎಂದರು.
ಅತಿ ಹೆಚ್ಚು ನಿಂಬೆ ಬೆಳೆಯುವ ಇಂಡಿ, ಸಿಂದಗಿ ತಾಲ್ಲೂಕಿನ ನಿಂಬೆ ಬೆಳೆ ರೈತರು ದಲ್ಲಾಳಿಗಳ ಹಾವಳಿಯಿಂದ ವಂಚನೆಗೊಳ್ಳುತ್ತಿದ್ದು ಅದನ್ನು ತಪ್ಪಿಸಲು ನನ್ನ ಅಧಿಕಾರ ಅವಧಿಯಲ್ಲಿ ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಜಲ್ಲಾ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ, ದಲ್ಲಾಳಿಗಳು ರೈತರು ದಾರಿ ತಪ್ಪಿಸುತ್ತಿದ್ದಾರೆ, ರೈತರು ಯಾರ ಮೇಲೂ ಅವಲಂಬನೆಯಾಗದೆ ಸರ್ಕಾರದ ಕಾಯ್ದೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ದೇಶದಲ್ಲಿಯೆ ಅತೀ ಹೆಚ್ಚು ಎಪಿಎಂಸಿ ದಲ್ಲಾಳಿಗಳಿರುವುದು ಪಂಜಾಬ,ಹರಿಯಾಣದಲ್ಲಿ ಅದಕ್ಕೆ ಅಲ್ಲಿ ದಲ್ಲಾಳಿಗಳು ರೈತರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೃಷಿ ಅಧಿಕಾರಿ ಯಾಸ್ಮಿನ್ ಮೊಕಾಶಿ ಮಾತನಾಡಿ ಯಾವ ದೇಶ ಕೃಷಿಯಿಂದ ಅಭಿವೃದ್ಧಿ ಹೊಂದುವುದಿಲ್ಲವೂ ಅದು ಯಾವುತ್ತೂ ಅಭಿವೃದ್ಧಿ ಆಗುವುದಿಲ್ಲ, ಅದಕ್ಕೆ ಸರಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಆದರ ಸದುಪಯೋಗ ಪಡೆದುಕೊಳ್ಳಿ ಆರೋಗ್ಯಯುತ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ರಾಸಾಯನಿಕ ಕೃಷಿ ತೊಲಗಿಸಿ ಎಂದು ಹೇಳಿದರು.
ಸಾನ್ಯಿಧ್ಯ ವಹಿಸಿದ್ದ ವಿರಕ್ತ ಮಠದ ಜಗದೇವ ಮೊಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ, ರೈತ ಮುಖಂಡ ಸಿದ್ದರಾಮ ರಂಜಣಗಿ ಮಾತನಾಡಿದರು. ಸಿಂದಗಿ ಎಪಿಎಂಸಿ ಅಧ್ಯಕ್ಷ ಗೊಲ್ಲಾಳಪ್ಪಗೌಡ ರೂಗಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಗುರುಪಾದ ಬಾಸಗಿ, ರಾಜು ಗುಂದಗಿ, ಶಿವಶರಣ ಬಿರಾದಾರ, ಬಾಗಪ್ಪಗೌಡ ಪಾಟೀಲ,ಚಂದು ಹಳೇಮನಿ,ಗಂಗಾಧರ ಉಪ್ಪಿನ,ಅಪ್ಪು ಶೆಟ್ಟಿ,ಸಂತೋಷ ಉಪ್ಪಿನ,ಮಹಾಂತು ಹಳೇಮನಿ,ಮಲ್ಲಿಕಾರ್ಜುನ ಅನಂತಗೊಳ,ಸುಗಲಾಬಾಯಿ ನಂದೂರ, ಮುದ್ದುಗೌಡ ಪಾಟೀಲ,ಹನುಮಂತ ಸಿನ್ನೂರ,ದೇವಿಂದ್ರ ಮಳ್ಳಿ, ಸುನೀಲ ನಾರಾಯಣಕರ ಇದ್ದರು.