ರೈತರು ತಮ್ಮ ಜಮೀನುಗಳಿಗೆ ನೀರು ಹರಿಸಲು ಜೀವಭಯ ಬಿಟ್ಟು ಸಾಹಸ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.22:- ತಾಲೂಕಿನ ಹೇಮಗಿರಿ ನಾಲಾ ವ್ಯಾಪ್ತಿಯ ನೀರು ಪೂರೈಕೆ ತೂಬುಗಳು ನವೀಕರಣಗೊಳ್ಳದೆ ರೈತರು ತಮ್ಮ ತಮ್ಮ ಜಮೀನುಗಳಿಗೆ ನೀರು ಹರಿಸಲು ಜೀವಭಯ ಬಿಟ್ಟು ಸಾಹಸ ಮಾಡಬೇಕಾಗಿದೆ.
ಹೇಮಾವತಿ ನದಿಗೆ ಅಡ್ಡಲಾಗಿ ಶತಮಾನಗಳ ಹಿಂದೆ ನಿರ್ಮಿಸಲಾದ ತಾಲೂಕಿನ ಮಂದಗೆರೆ ಮತ್ತು ಹೇಮಗಿರಿ ಅಣೆಕಟ್ಟೆ ನಾಲೆಗಳನ್ನು ಕಳೆದ ಒಂದು ದಶಕದ ಹಿಂದೆ ಅಧುನೀಕರಣಗೊಳಿಸಲಾಗಿದೆ. ನಾಲಾ ವ್ಯಾಪ್ತಿಯ ಕೊನೆಯ ಹಂತದ ರೈತರಿಗೆ ನೀರು ತಲುಪಿಸುವ ಸದುದ್ದೇಶದಿಂದ ಅಂದಿನ ಶಾಸಕರಾಗಿದ್ದ ಕೆ.ಬಿ.ಚಂದ್ರಶೇಖರ್ ಅವರು ಸುಮಾರು 250 ಕೋಟಿ ರೂ ಅಂದಾಜು ವೆಚ್ಚದಲ್ಲಿ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಮಾಡಿಸಿದರು. ಇದರಿಂದಾಗಿ ಈ ನಾಲಾ ವ್ಯಾಪ್ತಿಯ ರೈತರು ಇಂದಿಗೂ ಸುಗಮವಾಗಿ ನೀರು ಪಡೆಯುತ್ತಿದ್ದಾರೆ.
ನಾಲಾ ಅಧುನೀಕರಣದ ಸಮಯದಲ್ಲಿ ರೈತರ ಜಮೀನುಗಳಿಗೆ ನೀರು ವಿತರಿಸುವ ಹಳೆಯ ತೂಬುಗಳನ್ನು ಬದಲಿಸಿ ಅಧುನೀಕರಣಗೊಳಿಸಬೇಕಾಗಿತ್ತು. ನಾಲೆ ಅಧುನೀಕರಣಗೊಂಡರು ನಾಲೆಯ ತೂಬುಗಳು ಆಧುನೀಕರಣಗೊಳ್ಳದ ಪರಿಣಾಮ ಕಾಲುವೆಗೆ ನೀರು ಬಂದ ಸಮಯದಲ್ಲಿ ತೇಲಿಬಂದ ಕಸಕಡ್ಡಿಗಳು, ಕಾಯಿ ಬುಂಡೆಗಳು ನಾಲಾ ತೂಬಿನೊಳಗೆ ಸಿಲುಕಿಕೊಳ್ಳುತ್ತವೆ. ಇದರ ಪರಿಣಾಮ ತೂಬಿನಲ್ಲಿ ನೀರು ಹರಿಯದೆ ಕಟ್ಟಿಕೊಳ್ಳುತ್ತಿದೆ. ಕಟ್ಟಿಕೊಂಡ ಕಸಕಡ್ಡಿಗಳು ಕಾಯಿ ಬುಂಡೆಗಳನ್ನು ತೂಬಿನಿಂದ ಹೊರ ತೆಗೆಯಲು ರೈತರು ತುಂಬಿ ಹರಿಯುವ ರಭಸವಾದ ಕಾಲುವೆ ನೀರಿನಲ್ಲಿ ಉದ್ದವಾದ ಮರದ ಜಲ್ಲೆಗಳನ್ನು ಬಳಸಿ ಮುಳುಗಿ ಮುಳುಗಿ ರಭಸವಾಗಿ ಜಬ್ಬಿ ತೂಬಿನಲ್ಲಿ ನೀರು ಕೀಳಬೇಕಾಗಿದೆ.
ಕಟ್ಟಿಕೊಂಡ ತೂಬಿನಿಂದ ನೀರು ಕೀಳಲು ರೈತರು ಜೀವ ಭಯಬಿಟ್ಟು ನೀರಿನಲ್ಲಿ ಮುಳುಗಬೇಕಾದ ಪರಿಸ್ಥಿತಿಯಿದ್ದರೂ ನೀರಾವರಿ ಇಲಾಖೆಯ ಎಂಜಿನಿಯರುಗಳು ರೈತರ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ನಾಲೆಯಲ್ಲಿ ನೀರು ಹರಿಸುವ ಮುನ್ನ ನಾಲೆಯ ಎಲ್ಲಾ ತೂಬುಗಳನ್ನು ಒಮ್ಮೆ ಪರಿಶೀಲಿಸಬೇಕಾದ ಜವಾಬ್ದಾರಿ ನೀರಾವರಿ ಇಲಾಖೆಯ ಎಂಜಿನಿಯರುಗಳಿಗೆ ಸೇರಿದೆ. ಇದಕ್ಕಾಗಿ ಇಲಾಖೆಯಲ್ಲಿ ಸವುಡಿ ಸಿಬ್ಬಂಧಿಗಳಿದ್ದಾರೆ. ಹಿಂದೆಲ್ಲಾ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಸವುಡಿಗಳು ನಾಲಾ ಏರಿಯ ಉದ್ದಕ್ಕೆ ಸರಿಸಮಾನವಾದ ಕಬ್ಬಿಣದ ಜಲ್ಲೆಗಳನ್ನು ಬಳಸಿ ತೂಬು ಕಟ್ಟಿಕೊಂಡರೆ ತಕ್ಷಣವೇ ಕಬ್ಬಿಣದ ಜಲ್ಲೆ ಬಳಸಿ ಕಟ್ಟಿಕೊಂಡ ತೂಬುಗಳನ್ನು ಸರಿಪಡಿಸುತ್ತಿದ್ದರು.
ಇದೀಗ ನಾಲಾ ಏರಿಗಳ ಮೇಲೆ ಸವುಡಿಗಳು ಮತ್ತು ಎಂಜಿಯರುಗಳು ಸಂಚರಿಸಿ ಪರಿಶೀಲಿಸುವುದನ್ನು ಕೈ ಬಿಟ್ಟಿದ್ದಾರೆ. ಕಟ್ಟಿಕೊಂಡ ತೂಬುಗಳನ್ನು ತೆರವುಗೊಳಿಸಲು ರೈತರ ಬಳಿ ಯಾವುದೇ ಸಲಕರೆಣೆಗಳಿಲ್ಲ. ರೈತರು ಅಡಿಕೆ ದಬ್ಬೆ ಅಥವಾ ಬಿದಿರಿನ ಜಲ್ಲೆಗಳನ್ನು ಬಳಸಿ ತೂಬಿನ ಕಸಕಡ್ಡಿಗಳನ್ನು ತಾವೇ ಹೊರತೆಗೆಯಬೇಕಾಗಿದೆ. ರೈತರು ಅಗತ್ಯಾವಾದಾಗ ನೀರು ಬಿಟ್ಟುಕೊಳ್ಳಲು ಮತ್ತು ಬೇಡವಾದಾಗ ಕಾಲುವೆ ನೀರನ್ನು ಬಂದ್ ಮಾಡಲು ನೀರಾವರಿ ಇಲಾಖೆ ಕಬ್ಬಿಣದ ಗೇಟ್ ಅಳವಡಿಸಿದೆ.
ಆದರೆ ಬಹುತೇಕ ಕಡೆ ಈ ಗೆಟ್‍ವಾಲ್‍ಗಳು ತುಕ್ಕು ಹಿಡಿದಿದ್ದು ಅವುಗಳನ್ನು ಇಲಾಖೆ ನಿರ್ವಹಣೆ ಮಾಡುತ್ತಿಲ್ಲ. ತುಕ್ಕು ಹಿಡಿದ ಗೇಟ್‍ವಾಲ್‍ಗಳನ್ನು ತಿರುಗಿಸಿ ನೀರು ಬೇಡವಾದಾಗ ಬಂದ್ ಮಾಡಲು ಸಾಧ್ಯವಿಲ್ಲದ ಕಾರಣ ಕೆಲವು ಕಡೆ ರೈತರೇ ತೂಬುಗಳಿಗೆ ಕಾಯಿಬುಂಡೆ ಮತ್ತಿತರ ವಸ್ತುಗಳನ್ನು ಬಳಕೆ ಮಾಡಿ ತೂಬು ಬಂದ್ ಮಾಡುತ್ತಾರೆ. ಇದರಿಂದಲೂ ಕಾಲುವೆಗೆ ನೀರು ಬಿಟ್ಟಾಗ ತೂಬು ಕೀಳಲು ಸಮಸ್ಯೆಯಾಗುತ್ತಿದೆ.
ನೀರಾವರಿ ಇಲಾಖೆ ತಕ್ಷಣವೇ ನದಿ ಅಣೆಕಟ್ಟೆ ನಾಲೆಗಳ ಎಲ್ಲಾ ತೂಬುಗಳನ್ನು ಪರಿಶೀಲನೆ ಮಾಡಬೇಕು. ನಿರ್ವಹಣಾ ಕೊರತೆಯಿಂದ ತುಕ್ಕು ಹಿಡಿದಿರುವ ತೂಬಿನ ಗೆಟ್ ವಾಲ್ ಗಳನ್ನು ಸರಿಪಡಿಸಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.