ರೈತರು ಕೃಷಿ ಇಲಾಖೆಯ ಸೌಲಭ್ಯಗಳು ಪಡೆದುಕೊಳ್ಳಲು ಮುಂದಾಗಬೇಕು

ಬಸವಕಲ್ಯಾಣ:ನ.9: ರೈತರು ಸರಕಾರದ ಯೋಜನೆಗಳು ಸದ್ಭಳಕೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು, ಸಂಕಷ್ಟದಲ್ಲಿ ಆತ್ಮಹತ್ಯೆ ಮಾಡಿಕೊಳ್ಳದೇ ಧೈರ್ಯದಿಂದ ಜೀವನ ಸಾಗಿಸಿ ನಿಮ್ಮ ಜೊತೆಗೆ ಸರಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಶಾಸಕ ಶರಣು ಸಲಗರ ಅವರು ರೈತರಿಗೆ ಆತ್ಮಸೈರ್ಯ ತುಂಬಿದರು.

ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಂಡ ರೈತರಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಧೃಡೀಕರಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ರೈರಿಗಾಗಿ ಹತ್ತು ಹಲವು ಯೋಜನೆಗಳು ಜಾರಿಗೆ ತಂದಿದೆ. ಜೊತೆಗೆ ರೈತರು ಕೃಷಿ ಇಲಾಖೆಯ ಸೌಲಭ್ಯಗಳು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರಕಾರ 50 ಸಾವಿರ ಪರಿಹಾರ ಧನ ಪತ್ರ ವಿತರಿಸಲಾಗುತ್ತಿದೆ. ಆದರೆ ರೈತರು ಮುಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳದೇ ಕೃಷಿ ಇಲಾಖೆಯ ಸೌಲಭ್ಯ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಯಾವುದೇ ರೀತಿಯ ಸಾಲಭಾದೆಯ ಆತಂಕಕ್ಕೆ ರೈತರು ಒಳಗಾಗಬಾರದು, ವಿವಿಧ ಬೆಳೆಗಳನ್ನು ಬೆಳೆದು ಬೆಳೆ ವೈವಿದ್ಯತೆ ಕಾಪಾಡಿಕೊಂಡು ಆದಾಯ ದ್ವೀಗುಣಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತ್ರತ್ವದ ರಾಜ್ಯ ಬಿಜೆಪಿ ಸರಕಾರ ಎಲ್ಲಾ ರೈತರಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ಇದೇ ಸಂದರ್ಭದಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕ ಹಾಗೂ ಕೃಷಿ ಯಂತ್ರೀಕರಣ ಯೋಜನೆಯಡಿ ಯಂತ್ರೋಪಕರಣ ಹಾಗೂ ಬಿತ್ತನೆ ಬೀಜಗಳನ್ನು ವಿತರಿಸಿದರು. ಈ ವೇಳೆ ಹುಲಸೂರ ತಹಸೀಲ್ದಾರ ಶಿವಾನಂದ ಮೇತ್ರೆ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ, ಕೃಷಿ ಅಕಾರಿ ಪ್ರಶಾಂತ ವಾಲಿ, ಮನೀಷಾ ಬಿರಾದಾರ, ಆಕಾಶ ಬಿರಾದಾರ ಉಪಸ್ಥಿತರಿದ್ದರು.