ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.23: ರೈತರು ದೇಶದ ಬೆನ್ನೆಲುಬಾಗಿದ್ದು, ರೈತರು ಆರ್ಥಿಕವಾಗಿ ಸ್ಥಿತಿವಂತರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ವವಾಗುತ್ತದೆ ಎಂದು ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಜರ್ಸ್‍ನ ಸೀಮಾಂಧ್ರ ಪ್ರದೇಶದ ಮಾರ್ಕೇಟಿಂಗ್ ಮ್ಯಾನೇಜರ್ ಎಂ.ಜಿ. ದೇಸಾಯಿ ತಿಳಿಸಿದರು.
ತಾಲೂಕಿನ ಗಡಿಭಾಗದಲ್ಲಿರುವ ಗೂಳ್ಯಂ ಗ್ರಾಮದಲ್ಲಿ ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಜರ್ ವತಿಯಿಂದ ರೈತರಿಗೆ ಹಮ್ಮಿಕೊಂಡಿದ್ದ ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗಳ ಕುರಿತು ಏರ್ಪಡಿಸಿದ್ದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಹೆಚ್ಚಾಗಿ ಒಣ ಮೆಣಸಿನಕಾಯಿ ಮತ್ತು ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದು, ಈ ಬೆಳೆಗಳನ್ನು ಬೆಳೆಸಲು ರೈತರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೇಸಾಯ ತಜ್ಞ ಡಾ.ಎಂ.ಎ.ಬಸವಣ್ಣೆಪ್ಪ ಮಾತನಾಡಿ ರೈತರು ಕೇವಲ ಒಂದೇ ಬೆಳೆಗೆ ಜೋತು ಬೀಳದೆ ಸಮಗ್ರ ಬೆಳೆ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದರೆ ಅನುಕೂಲವಾಗುತ್ತದೆ. ಸಮಗ್ರ ಕೃಷಿಯೊಂದಿಗೆ ಕುರಿ, ಕೋಳಿ, ಮೇಕೆ, ಹಸು, ಎಮ್ಮೆಗಳನ್ನು ಸಾಕಬೇಕು, ಇದರಿಂದ ನಿರಂತರವಾಗಿ ಅದಾಯ ಬರುತ್ತದೆ. ರೈತರು ಏಕ ಬೆಳೆ ಬೆಳೆಯುವ ಪದ್ಧತಿಯನ್ನು ಕೈ ಬಿಟ್ಟು ವಿವಿಧ ಬೆಳೆಗಳನ್ನು ಬೆಳೆದರೆ ಮಾರುಕಟ್ಟೆಯಲ್ಲಿ ಒಂದು ಬೆಳೆಗೆ ಧರ ಕಡಿಮೆ ಇದ್ದರೆ ಮತ್ತೊಂದು ಬೆಳೆಯಲ್ಲಿ ಧರ ಹೆಚ್ಚಿರುತ್ತದೆ. ಇದರಿಂದ ಕೃಷಿಯಲ್ಲಿ ರೈತರು ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಣ್ಣು ವಿಜ್ಞಾನಿ ಡಾ.ರವಿ ಮಾತನಾಡಿ ಮನುಷ್ಯನ ಆರೋಗ್ಯಕ್ಕೆ ರಕ್ತ ಮತ್ತು ಮೂತ್ರ ಪರೀಕ್ಷೆ ಎಷ್ಟು ಮುಖ್ಯವೋ, ಕೃಷಿಯಲ್ಲಿ ಮಣ್ಣು ಪರೀಕ್ಷೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದು, ಮಣ್ಣು ಪರೀಕ್ಷೆ ಮಾಡಿಸಿದರೆ ಜಮೀನಿಗೆ ಮಾಡಬೇಕಾದ ರಸಗೊಬ್ಬರದಖರ್ಚುಗಳನ್ನು ಉಳಿಸಬಹುದು ಅಲ್ಲದೆ ಇಳುವರಿ ಹೆಚ್ಚು ಪಡೆಯಬಹುದು. ಭೂಮಿಯ ಫಲವತ್ತತೆಯನ್ನು ಉಳಿಸಲು ಸಾಧ್ಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ರೈತರು ನೀರಾವರಿಯಲ್ಲಿ ವರ್ಷಕ್ಕೆ ಒಂದು ಬಾರಿ, ಮಳೆಯಾಶ್ರಿತ ಪ್ರದೇಶದ ರೈತರು ಮೂರು ವರ್ಷಕ್ಕೊಮ್ಮೆ ಮಣ್ಣು ಪರಿಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕೀಟ ತಜ್ಞ ಆನಂದ ಕುಮಾರ್ ಮಾತನಾಡಿ ಕಳೆದ ಬಾರಿ ಒಣ ಮೆಣಸಿನಕಾಯಿ ಬೆಳೆದ ರೈತರು ಕರಿನುಸಿ ಹುಳುವಿನ ಬಾದೆಯಿಂದ ಸಾಕಷ್ಟು ನಷ್ಟವನ್ನು ಅನುಭವಿಸಿದ್ದು, ಈ ವರ್ಷ ಮೆಣಸಿನಕಾಯಿ ಬೆಳೆಯನ್ನು ಬೆಳೆಯಬೇಕೋ, ಬೇಡವೋ ಎನ್ನುವ ಗೊಂದಲ ರೈತರನ್ನು ಕಾಡುತ್ತಿದೆ. ಆದರೆ ಈ ವರ್ಷವೂ ಮೆಣಸಿನಕಾಯಿ ಬೆಳೆಯನ್ನು ಬೆಳೆಯಿರಿ, ಆದರೆ ಕರಿನುಸಿ ಹುಳುವಿನ ಬಾದೆ ತಡೆಯುವಂತೆ ಮೆಣಸಿನಕಾಯಿ ಬೆಳೆಗೆ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳನ್ನು ಸಿಂಪಡಿಸಿ ಅಲ್ಲದೆ ಮೆಣಸಿನಕಾಯಿ ಹೊಲದ ಸುತ್ತಲು 2 ಸಾಲು ಮೆಕ್ಕೆಜೋಳದ ಬೆಳೆಯನ್ನು ಬೆಳೆದರೆ ವಿವಿದ ಕೀಟಗಳು ಬರದಂತೆ ತಡೆಯಲು ತಡೆಗೋಡೆಯಂತೆ ಕೆಲಸ ಮಾಡುತ್ತದೆ. ರೈತರು ಆದಷ್ಟು ಮುಂಜಾಗ್ರತೆ ಕ್ರಮಗಳನ್ನು ವಹಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ಗೋವಿಂದಪ್ಪ, ಆರ್.ಸಿ.ಎಫ್‍ನ ಏಸುರತ್ನಂ, ವಿಶಾಲ್, ಕೃಷಿ ಅಧಿಕಾರಿ ಸಾಂಬಶಿವಪ್ಪ, ಬಳ್ಳಾರಿ ಆರ್.ಸಿ.ಎಫ್‍ನ ಗುರುಲಿಂಗಪ್ಪ ಮಾತನಾಡಿದರು. ವಿವಿಧ ಗ್ರಾಮಗಳ ರೈತರು ಇದ್ದರು.