ರೈತರು ಎಚ್ಚರದಿಂದಿರಲು ಶಾಸಕ ಶರಣು ಸಲಗರ ಸಲಹೆ

ಬಸವಕಲ್ಯಾಣ:ಜೂ.6: ಡಿಎಪಿ ಹೆಸರಿನಲ್ಲಿ ದಾಸ್ತಾನು ಮಾಡಿಟ್ಟ ನಕಲಿ ರಸಗೊಬ್ಬರವನ್ನು ಪತ್ತೆ ಹಚ್ಚಿರುವ ಘಟನೆ ತಾಲ್ಲೂಕಿನ ಯಲ್ಲದಗುಂಡಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು ವಿಷಯ ತಿಳಿಯುತ್ತಿದಂತೆ ಶಾಸಕ ಶರಣು ಸಲಗರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಕುರಿತು ಮಾಹಿತಿ ನೀಡಿರುವ ತಾಲ್ಲೂಕು ಕೃಷಿ ಅಧಿಕಾರಿ ವೀರಶೆಟ್ಟಿ ಅವರು, ಮುಡಬಿ ಹೋಬಳಿ ವ್ಯಾಪ್ತಿಯ ಯಲ್ಲದಗುಂಡಿ ಗ್ರಾಮದ ಕೆಲ ರೈತರು ನೀಡಿರುವ ದೂರಿನನ್ವಯ ವಿಷಯ ಗೊತ್ತಾಗಿ ನಾನು ಹಾಗೂ ನಮ್ಮ ಸಿಬ್ಬಂದಿ ಕೂಡಲೇ ಯಲ್ಲದಗುಂಡಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದೇವು. ಉಮೇಶ್ ತಂದೆ ಮಹಾದೇವ ಎಂಬಾತ ಏಜೆಂಟ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾಗಿದ್ದಾನೆ. ಕಿಸಾನ್ ಗೋಲ್ಡ್ ಭೀಮಾ ಕೃಷ್ಣಾ ಹೆಸರಿನ ನಕಲಿ ಡಿಎಪಿ ಗೊಬ್ಬರವನ್ನು ರೈತರಿಗೆ ವಿತರಿಸಬೇಕೆಂದು ಕಳೆದ ಮೂರು ದಿನಗಳಿಂದ ವ್ಯವಸ್ಥಿತ ಜಾಲವೊಂದು ರೂಪಿಸಿದ್ದು, ಇದಕ್ಕಾಗಿ ಕಲಬುರ್ಗಿಯಿಂದ ಸುಮಾರು ನೂರು ಯುವಕರು ಯಲ್ಲದಗುಂಡಿ ಗ್ರಾಮಕ್ಕೆ ಬಂದಿದ್ದರು ಎಂಬುವುದು ಘಟನೆ ಬೆಳಕಿಗೆ ಬಂದ ಮೇಲೆ ಗೊತ್ತಾಗಿದೆ. ರೈತರು ಮೋಸ ಹೋಗಿ ಖರೀದಿ ಮಾಡುವ ಮುನ್ನವೇ ಗ್ರಾಮದಲ್ಲಿ ದಾಸ್ತಾನು ಮಾಡುತ್ತಿದ್ದ 420 ಬ್ಯಾಗ್‍ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಘಟನೆ ಕುರಿತು ರೈತರ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂದರು.

ಜಿಲ್ಲಾ ಕೃಷಿ ಇಲಾಖೆಯ ಜಾರಿ ದಳದ ಸಹಾಯಕ ನಿರ್ದೇಶಕರಾದ ಅನ್ಸಾರಿ ಎಂ.ಕೆ., ಮಾರ್ಥಂಡ, ಮಂಠಾಳ ಕೃಷಿ ಅಧಿಕಾರಿ ಶ್ರಿಶೈಲ್, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಕೃಷ್ಣಾ ಪಾಟೀಲ್, ತಾಂತ್ರಿಕ ಸಹಾಯಕ ಪ್ರದೀಪ್ ಹಾಗೂ ಬಿಜೆಪಿ ತಾಲ್ಲೂಕಾಧ್ಯಕ್ಷ ಅಶೋಕ್ ವಕಾರೆ, ಹುಲಸೂರ ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಹಣಮಂತ ಧನಶೆಟ್ಟಿ, ಬಿಜೆಪಿ ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಶಿವರಾಜ ತಾಟೆ, ಸದಾನಂದ್ ಪಾಟೀಲ್, ಭೀಮಾ ತಾಟೆ, ಗಣೇಶ್ ಸೋಮವಂಶಿ ಇನ್ನಿತರರು ಉಪಸ್ಥಿತರಿದ್ದರು.


ಮುಂಗಾರು ಹಂಗಾಮಿನ ಬಿತ್ತನೆಯ ತಯಾರಿ ಮಾಡುಕೊಳ್ಳುವ ಅವಸರದಲ್ಲಿರುವ ಕ್ಷೇತ್ರದ ರೈತರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಕಲಿ ಗೊಬ್ಬರ ಹಾಗೂ ಬೀಜಗಳಿಂದ ಎಚ್ಚರದಿಂದೀರಿ. ರಸಗೊಬ್ಬರ ಹಾಗೂ ಬೀಜಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದಾಗ ತಾವು ಕೂಲಂಕುಷವಾಗಿ ಅವುಗಳನ್ನು ಪರಿಶೀಲಿಸಿ ಖರೀದಿಸಿ. ನಕಲಿ ರಸಗೊಬ್ಬರ ಮಾರಾಟದ ಜಾಲವನ್ನು ಭೇಧಿಸಿ ನೂರಾರು ರೈತರು ಮೋಸ ಹೋಗುವುದನ್ನು ತಪ್ಪಿಸಿದ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಯಲ್ಲದಗುಂಡಿ ಗ್ರಾಮಸ್ಥರಿಗೆ ಧನ್ಯವಾದಗಳು.
-ಶರಣು ಸಲಗರ

ಶಾಸಕರು, ಬಸವಕಲ್ಯಾಣ.

ಡಿಎಪಿ (ನೈಟ್ರೋಜನ್, ಫೋಸ್ಪರಸ್) ಹೆಸರಿನಲ್ಲಿ ಕ್ಯಾಲ್ಸಿಯಂ ಮ್ಯಾಗನಿಜಿಯಂ (ಜಿಪ್ಸ್‍ಂ ರೂಪದ) ಮಿಶ್ರಿತ ಗೊಬ್ಬರ ಮಾರಾಟ ಮಾಡಬೇಕೆಂದಿದ್ದ ಜಾಲವನ್ನು ಇಲಾಖೆ ಭೇದಿಸಿದ್ದು, ತಪಿಸ್ಥರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
-ವೀರಶೆಟ್ಟಿ
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು,
ಬಸವಕಲ್ಯಾಣ.