ರೈತರು ಅಸಂಘಟಿತ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ.

ದಾವಣಗೆರೆ. ಜ.೮; ಕೇಂದ್ರ ಮತ್ತು ರಾಜ್ಯ ಸರಕಾರಗಳು ತರಾತುರಿಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮದಿಂದಾಗಿ ಲಕ್ಷಾಂತರ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಆದ್ದರಿಂದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹರಿಹರದಲ್ಲಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ಕಾರ್ಮಿಕವರ್ಗವನ್ನು ನಿರ್ಲಕ್ಷಿಸಿವೆ. ಇದೇ ಸಮಯವನ್ನ ಬಳಸಿಕೊಂಡ ಕೇಂದ್ರ ಸರ್ಕಾರವು ರೈತರ-ಕಾರ್ಮಿಕರ ಹಲವಾರು ಕಾಯಿದೆಗಳನ್ನು ಶ್ರೀಮಂತ ಕಾರ್ಪೋರೇಟ್ ಕಂಪನಿಗಳ ಪರವಾಗಿ ಜಾರಿಮಾಡಿ, ಜನರ ಸಂವಿಧಾನಾತ್ಮಕ ಹೋರಾಟವನ್ನು ಹತ್ತಿಕ್ಕಲು ಕೊರೋನ ವಿಪತ್ತು ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ಪ್ರತಿಬಂಧವನ್ನು ಏರಿದೆ. ಈ ಹಿನ್ನಲೆಯಲ್ಲಿ  ವಿವಿಧ ಭಾಗಗಳ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಕೊವೀಡ್ 19 ಪರಿಹಾರವನ್ನು ಎಲ್ಲಾ ಕಾರ್ಮಿಕರಿಗೆ ಹಾಗೂ ರೈತರಿಗೆ ಪ್ರಕಟಿಸಬೇಕು ಎಂದು ಆಗ್ರಹಿಸಿದರು.ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಘೋಷಿಸಿರುವ ರೂ. 5000 ಪರಿಹಾರ ಇನ್ನೂ ತಾಲ್ಲೂಕಿನ ಸಾವಿರಾರು ಅರ್ಜಿದಾರರಿಗೆ ಅಗತ್ಯ ದಾಖಲೆ ನೀಡಿದ್ದಾಗ್ಯೂ ಸರಿಯಾಗಿ ಪಾವತಿಯಾಗಿಲ್ಲ. ಅಲ್ಲದೆ ನೂರಾರು ಸಂಖ್ಯೆಯಲ್ಲಿ ಶೈಕ್ಷಣಿಕ, ಮದುವೆ, ವೈಧ್ಯಕೀಯ ಪಿಂಚಣಿ ನೆರವು ಸೇರಿದಂತೆ ವಿವಿಧ ಪರಿಹಾರ ಅರ್ಜಿಗಳು ಬಾಕಿ ಇವೆ ಕೂಡಲೇ ಅವುಗಳನ್ನು ಇತ್ಯರ್ಥ ಪಡಿಸಬೇಕು. ಅರ್ಜಿ ಸಲ್ಲಿಸಿದ ತಕ್ಷಣವೇ ವಿಳಂಬವಿಲ್ಲದೆ ನೊಂದಣಿ ಮತ್ತು ನವೀಕರಣಗೊಳಿಸಿ ಕಾರ್ಮಿಕರಿಗೆ ಕಾರ್ಡ ವಿತರಿಸಬೇಕು. ತಾಲ್ಲೂಕಿನಲ್ಲಿ ಹತ್ತಾರು ವ್ಯಕ್ತಿಗಳು ಕಟ್ಟಡ ಸಂಘಗಳನ್ನು ರಚಿಸಿಕೊಂಡು ನಕಲಿ ಕಾರ್ಡುಗಳನ್ನು ಮಾಡಿಸುತ್ತಾ ಮನಬಂದಂತೆ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಅಂತಹವರನ್ನು ನಿಯಂತ್ರಿಸಿ ಕೇಂದ್ರ ಕಾರ್ಮಿಕ ಸಂಘಗಳ ಮೂಲಕ ಸಲ್ಲಿಕೆಯಾಗುವ ನೈಜ ಕಾರ್ಮಿಕರ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಿ ಸೌಲಭ್ಯಗಳ ಪರಿಹಾರ ಧನ ಸಹಾಯ ವಿತರಿಸಲು ಕ್ರಮವಹಿಸಬೇಕು. ಈ ಸಂಬಂಧ ಕೂಡಲೇ ತಮ್ಮ ಅಧ್ಯಕ್ಷತೆಯಲ್ಲಿ ಕೇಂದ್ರ ಕಾರ್ಮಿಕ ಸಂಘಗಳಿಗೆ ಸೇರ್ಪಡೆಗೊಂಡಿರುವ ಕಟ್ಟಡ ಕಾರ್ಮಿಕ ಸಂಘಗಳ ಮುಖಂಡರ ಸಭೆಯನ್ನು ಕೂಡಲೇ ನಡೆಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.