ರೈತರಿಲ್ಲದೆ ಸೊರಗಿದ ಕೃಷಿ ಮೇಳ


ಬೆಂಗಳೂರು, ನ. ೧೨- ನಗರದ ಜಿಕೆವಿಕೆಯಲ್ಲಿ ಆಯೋಜಿಸಿರುವ ಭೌತಿಕ ಹಾಗೂ ಡಿಜಿಟಲ್ ಕೃಷಿಮೇಳ ಎರಡನೆ ದಿನವಾದ ಇಂದು ನಿರೀಕ್ಷಿತ ಮಟ್ಟದಲ್ಲಿ ರೈತರು ಆಗಮಿಸದಿದ್ದರೂ ಕೃಷೇತರರು ಕೃಷಿ ಮೇಳ ನೋಡಲು ಆಗಮಿಸಿ ಮಳಿಗೆಗಳಿಗೆ ಮುಗಿಬಿದ್ದರು.
ಪ್ರಶಸ್ತಿ ಪಡೆಯುವ ರೈತರು ಸೇರಿ ಬೆರಳೆಣಿಕೆಯಷ್ಟು ರೈತರು ಆಗಮಿಸಿದ್ದರು ಸಹ ಮಾಹಿತಿ ಪಡೆದುಕೊಳ್ಳುವಲ್ಲಿ ಹಿಂದೇಟು ಹಾಕಿದಂತಿತ್ತು. ಮಳಿಗೆಗಳಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕೃಷಿ ಉತ್ಪನ್ನಗಳನ್ನು ನೋಡಲು ಜನರು ಕೋವಿಡ್೧೯ ಮರೆತು ಸಾಮಾಜಿಕ ಅಂತರ ಮರೆತು ಗುಂಪುಗೂಡಿಕೊಂಡು ನೋಡುವುದರಲ್ಲಿ ಮಗ್ನರಾಗಿದ್ದರು. ಹೀಗಾಗಿ, ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಜನರಿಗಷ್ಟೆ ಮೀಸಲಾಗಿಟ್ಟು ಆಯೋಜಿಸಿದ್ದ ಕೃಷಿ ಮೇಳದ ಉದ್ದೇಶ ಈಡೇರಲಿಲ್ಲ.
ಸಲಹಾ ಘಟಕಗಳು ಖಾಲಿ ಖಾಲಿ: ಇನ್ನು ಕೃಷಿ ಮಳಿಗೆಗಳಲ್ಲೂ ಸಹ ಮಾಹಿತಿ ಪಡೆದುಕೊಳ್ಳುವವರ ಸಂಖ್ಯೆ ತೀರ ವಿರಳವಾಗಿತ್ತು. ಇನ್ನು, ಕೃಷಿ ಮೇಳದಲ್ಲಿ ಕೃಷಿ ಇಲಾಖೆಯ ೧೮ಕ್ಕೂ ಹೆಚ್ಚು ಸಲಹಾ ಘಟಕಗಳನ್ನು ತೆರೆದಿದ್ದು ಮಾಹಿತಿ ಪಡೆದುಕೊಳ್ಳಲು ರೈತರು ಮುಂದಾಗದಿದ್ದ ಕಾರಣ ಅಧಿಕಾರಿಗಳು ಖಾಲಿ ಕುಳಿತಿದ್ದರು.
ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ್ದ ವಿವಿಧ ತಳಿಗಳ ತಾಕುಗಳಿಗೆ ಹೆಚ್ಚಿನಸಂಖ್ಯೆಯಲ್ಲಿ ಜನರು ಆಗಮಿಸಿದರು.ಆದರೆ, ಕೆಲವೇ ಕೆಲವು ರೈತರನ್ನು ಹೊರತುಪಡಿಸಿ ಯಾರೊಬ್ಬರು ಅಲ್ಲಿ ಬೆಳೆಯಲಾದ ಬೆಳೆಗಳ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಬದಲಾಗಿ ತಾಕಿನ ಸುತ್ತಲು ಬೆಳೆಯಲಾದ ವಿಶಿಷ್ಟ ತಳಿಯ ಚಂಡುಹೂವಿಗೆ ಮೈಮರೆತು ಸೆಲ್ಫಿ, ಪೋಟೋಗಳನ್ನು ಕ್ತೆಗೆದುಕೊಳ್ಳುವುದರಲ್ಲಿ ಹೆಚ್ಚು ಆಸಕ್ತರಾಗಿದ್ದದ್ದು ಕಂಡುಬಂತು.
ನೀರಿನಿಂದಲೆ ಸೊಪ್ಪು,ತರಕಾರಿ: ಬೀಜ ವಿಜ್ಞಾನ ಮತ್ತು ತಾಂತ್ರಿಕ ವಿಭಾಗದವತಿಯಿಂದ ತೆರೆದಿದ್ದ ಮಳಿಗೆಯಲ್ಲಿ ಕೃಷಿ ಭೂಮಿಯ ಅಗತ್ಯವಿಲ್ಲದೆ ಎನ್.ಎಫ್.ಟಿ. ತಂತ್ರಜ್ಞಾನದಿಂದ ಚಿಕ್ಕ,ಚಿಕ್ಕ ಕೊಳವೆಗಳಲ್ಲಿ ನಿರಂತರವಾಗಿ
ನೀರು ಹರಿಯುವ ಪೋಷಕಾಂಶ
ಯುಕ್ತ ದ್ರಾವಣದಲ್ಲಿ ತಮಗೆ ಬೇಕಾದ ಸೊಪ್ಪು ತರಕಾರಿ ಬೆಳೆದುಕೊಳ್ಳಬಹುದಾದ
ತಂತ್ರಜ್ಞಾನ ಪರಿಚಯಿಸಿದೆ. ೯-ರಿಂದ ೧೦ಸಾವಿರ ವೆಚ್ಚದಲ್ಲಿ ಬೆಳೆಯಬಹುದಾಗಿದೆ.