ರೈತರಿಗೆ 5 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಕೆ: ಸಿಎಂ

ಬೆಂಗಳೂರು, ಅ. ೧೬- ರಾಜ್ಯದಲ್ಲಿ ರೈತರಿಗೆ ೫ ಗಂಟೆಗಳ ಕಾಲ ನಿರಂತರ ತ್ರಿ ಫೇಸ್ ವಿದ್ಯುತ್ ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. ಜತೆಗೆ ವಿದ್ಯುತ್ ಕೊರತೆಯನ್ನು ಸರಿದೂಗಿಸಲು ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಗೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಅಭಾವ ಇರುವುದು ರೈತರಿಗೂ ಗೊತ್ತಿದೆ. ರೈತರು ೭ ಗಂಟೆ ಬದಲು ಈಗಿನ ಪರಿಸ್ಥಿತಿಯಲ್ಲಿ ಸತತ ೪ ಗಂಟೆ ವಿದ್ಯುತ್ ಕೊಟ್ಟರೂ ಸಾಕು ಎಂದು ಹೇಳುತ್ತಿದ್ದಾರೆ. ಆದರೂ ನಾವು ರೈತರಿಗೆ ೫ ಗಂಟೆ ಸತತ ವಿದ್ಯುತ್ ನೀಡಲು ಸೂಚನೆ ಕೊಟ್ಟಿದ್ದೇನೆ ಎಂದರು.
ವಿದ್ಯುತ್ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವ ತೀರ್ಮಾನವನ್ನು ಮಾಡಿದ್ದೇವೆ. ಕಬ್ಬು ಕಾರ್ಖಾನೆಗಳು ಕಬ್ಬು ಅರೆಯಲು ಆರಂಭ ಮಾಡಿದರೆ ಅಲ್ಲೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಆ ವಿದ್ಯುತ್‌ನ್ನು ಖರೀದಿ ಮಾಡುತ್ತೇವೆ. ರೈತರಿಗೆ ಲೋಡ್‌ಶೆಡ್ಡಿಂಗ್ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಹಿಂದಿನ ಬಿಜೆಪಿ ಅಥವಾ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಲಿಲ್ಲ. ಹೀಗಾಗಿ ವಿದ್ಯುತ್ ಅಭಾವದ ಪರಿಸ್ಥಿತಿ ತಲೆದೋರಿದೆ. ಮಳೆ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ೨ ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಈ ಕೊರತೆಯನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸರಿ ಹೋಗಲಿದೆ ಎಂದರು.
ಕುಡಿಯುವ ನೀರು-ಮೇವು ಪೂರೈಕೆಗೂ ಕ್ರಮ
ರಾಜ್ಯದಲ್ಲಿ ೨೩೬ ತಾಲ್ಲೂಕುಗಳ ಪೈಕಿ ೨೧೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪ್ರಸ್ತುತ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಆದರೂ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು, ಮೇವು ಬೆಳೆಸಲು ಹಾಗೂ ಸಂಗ್ರಹಣೆಗೂ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದಲ್ಲಿ ಬರ ಇರುವುದರಿಂದ ಎಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕುಡಿಯುವ ನೀರಿಗೆ ಕೊರತೆಯಾಗುವ ಕಡೆ ಖಾಸಗಿ ಕೊಳವೆ ಬಾವಿಗಳಿಂದಲೂ ನೀರು ಪಡೆದು ಪೂರೈಸಬೇಕು. ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಸೂಚನೆ ನೀಡಲಾಗಿದೆ ಎಂದರು.
ಬರ ಪರಿಸ್ಥಿತಿ ಸಂದರ್ಭದಲ್ಲಿ ಜನರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಬರ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ೪೮೬೦ ಕೋಟಿ ರೂ. ಪರಿಹಾರ ಕೋರಿದ್ದೇವೆ. ೪೨ ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದ್ದು, ೩೦ ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಾಡಹಬ್ಬ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಾಂಕಾರ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸುತ್ತದೆ ಎಂದು ಅವರು ಹೇಳಿದರು.