ರೈತರಿಗೆ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗೆ ನೋಟಿಸ್

ಬೀದರ:ಜೂ.9: ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬೀದರ ಕಿಸಾನ್ ಸಕ್ಕರೆ ಕಾರ್ಖಾನೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ ಚವ್ಹಾಣ್ ಅವರು ತಿಳಿಸಿದ್ದಾರೆ.

ಈ ಕಾರ್ಖಾನೆಯು 2020-21ನೇ ಸಾಲಿನಲ್ಲಿ ಎಫ್‍ಆರ್‍ಪಿ ದರದಂತೆ ಕಬ್ಬು ಪೂರೈಸಿದ ರೈತರಿಗೆ ಪಾವತಿಸಬೇಕಾದ ರೂ.13.95 ಕೋಟಿ ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ವಿಳಂಬ ಮಾಡುತ್ತಿರುವುದನ್ನು ಕಂಡು ರೈತರಿಗೆ 14 ದಿವಸದೊಳಗಾಗಿ ಕಬ್ಬಿನ ಹಣ ಪಾವತಿಸುವಂತೆ ಹಾಗೂ ಅದರ ಅನುಪಾಲನಾ ವರದಿ ಸಲ್ಲಿಸುವಂತೆ ಈ ಮೊದಲು ಸೂಚಿಸಲಾಗಿತ್ತು.

ಈ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಾಕಿ ಪಾವತಿಸುವಂತೆ ಕಾರ್ಖಾನೆಯವರಿಗೆ ಸಚಿವರು ಸೂಚಿಸಿದ್ದರೂ ಇದುವರೆಗೂ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿದ್ದಾರೆ. ಕಬ್ಬು ನಿಯಂತ್ರಣ ಆದೇಶ 1966 3(3ಎ)ರ ಅನುಸಾರ ಸದರಿ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳೊಳಗಾಗಿ ಕಬ್ಬು ಬಿಲ್ಲು ಪಾವತಿಸದೇ ಇದ್ದಲ್ಲಿ ನಂತರದ ಅವಧಿಗೆ ವಾರ್ಷಿಕ ಶೇ.15ರ ಬಡ್ಡಿ ಪಾವತಿಸುವಂತೆ ಆದೇಶವಿದೆ. ಆದರೂ ಸಹ 2020-21ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಹಣ ಪಾವತಿಸಿರುವುದಿಲ್ಲ.

ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣವನ್ನು ಪಾವತಿಸದೇ ಕಬ್ಬು ನಿಯಂತ್ರಣ ಆದೇಶ 1966ರ ಕಲಂ 3(3ಎ) ಉಲ್ಲಂಘನೆ ಮಾಡಲಾಗಿದೆ. ಆದ್ದರಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ನೋಟೀಸ್ ತಲುಪಿದ ಕೂಡಲೇ ರೈತರ ಕಬ್ಬು ಬಿಲ್ಲು ತೀರುವಳಿ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಅವಕಾಶಗಳ ರೀತ್ಯಾ ಮತ್ತು ಕಬ್ಬು ನಿಯಂತ್ರಣ ಆದೇಶ 1966ರ ಕಲಂ 3(8)ರ ಪ್ರಕಾರ ಬಾಕಿಯನ್ನು ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗೆ ಕ್ರಮ ವಹಿಸಲಾಗುವುದೆಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಜನಪ್ರತಿನಿಧಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರೊಂದಿಗೆ ಈ ಮೊದಲು ನಡೆದ ಸಭೆಯ ನಿರ್ಣಯದಂತೆ ಪ್ರತಿ ಟನ್ ಕಬ್ಬಿಗೆ 2,400 ರೂ. ದರದಂತೆ ಮೊತ್ತ ಪಾವತಿಸಿ, ರೈತರ ಹಿತ ಕಾಪಾಡಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.